ಹೊಸದಿಗಂತ ಡಿಜಿಟಲ್ ಡೆಸ್ಕ್:
ದಸರಾ ಮತ್ತು ದೀಪಾವಳಿ ಹಬ್ಬಗಳ ಸಡಗರದಲ್ಲಿರುವ ದೇಶದ ಲಕ್ಷಾಂತರ ರೈಲ್ವೆ ಸಿಬ್ಬಂದಿಗೆ ಕೇಂದ್ರ ಸರ್ಕಾರವು ಬುಧವಾರ ಸಿಹಿ ಸುದ್ದಿವೊಂದನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ದೇಶದ 11,40,770 ರೈಲ್ವೆ ನೌಕರರಿಗೆ 78 ದಿನಗಳ ವೇತನಕ್ಕೆ ಸಮಾನವಾದ ಉತ್ಪಾದಕತೆ ಆಧಾರಿತ ಬೋನಸ್ ನೀಡಲು ಅಧಿಕೃತ ಅನುಮೋದನೆ ನೀಡಿದೆ.

ನೌಕರರ ಖಾತೆಗೆ ಗರಿಷ್ಠ 17,951 ರೂ. ಜಮೆ
ಅಧಿಕೃತ ಪ್ರಕಟಣೆಯ ಪ್ರಕಾರ, ಈ ಯೋಜನೆಯಡಿಯಲ್ಲಿ ಅರ್ಹತೆ ಹೊಂದಿರುವ ಪ್ರತಿಯೊಬ್ಬ ರೈಲ್ವೆ ನೌಕರನಿಗೂ 17,951 ರೂ. ಬೋನಸ್ ಮೊತ್ತ ಸಿಗಲಿದೆ. ಈ ಬೃಹತ್ ಬೋನಸ್ ವಿತರಣೆಗಾಗಿ ಕೇಂದ್ರ ಸರ್ಕಾರವು ಒಟ್ಟು 2,009.61 ಕೋಟಿ ರೂ.ಹಣದ ಬಜೆಟ್ ವೆಚ್ಚವನ್ನು ಸಂಪೂರ್ಣವಾಗಿ ಭರಿಸಲಿದೆ. ದುರ್ಗಾಪೂಜೆ ಮತ್ತು ದಸರಾ ರಜೆಗಳ ದಿನಗಳಿಗಿಂತ ಮುಂಚಿತವಾಗಿಯೇ ನೌಕರರ ಬ್ಯಾಂಕ್ ಖಾತೆಗಳಿಗೆ ಈ ಹಣ ತಲುಪಲಿದೆ.
ಯಾವೆಲ್ಲಾ ಸಿಬ್ಬಂದಿಗೆ ಸಿಗಲಿದೆ ಈ ಬೋನಸ್ ಭಾಗ್ಯ?
ರೈಲ್ವೆ ಇಲಾಖೆಯ ಪ್ರಮುಖ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಹಗಲಿರುಳು ಶ್ರಮಿಸುವ ಗೆಜೆಟೆಡ್ ಅಲ್ಲದ ಗ್ರೂಪ್ ‘ಸಿ’ ವಲಯದ ವಿವಿಧ ವಿಭಾಗಗಳ ನೌಕರರಿಗೆ ಈ ಬೋನಸ್ ಲಭಿಸಲಿದೆ. ಇದರಲ್ಲಿ ಟ್ರ್ಯಾಕ್ ಮೇಂಟೈನರ್ಗಳು, ಲೋಕೋ ಪೈಲಟ್ಗಳು, ಟ್ರೇನ್ ಮ್ಯಾನೇಜರ್ಗಳು, ಸ್ಟೇಷನ್ ಮಾಸ್ಟರ್ಗಳು, ತಾಂತ್ರಿಕ ಸಿಬ್ಬಂದಿ, ಟೆಕ್ನಿಷಿಯನ್ ಹೆಲ್ಪರ್ಗಳು, ಪಾಯಿಂಟ್ಸ್ಮನ್ಗಳು, ಮೇಲ್ವಿಚಾರಕರು ಹಾಗೂ ಕಚೇರಿ ಸಿಬ್ಬಂದಿ ಒಳಗೊಂಡಿದ್ದಾರೆ.
ಇದನ್ನೂ ಓದಿ:
ರೈಲ್ವೆ ಇಲಾಖೆಯ ದಾಖಲೆ ಬರೆದ ಸಾಧನೆ
ಕಳೆದ 2025-26 ರ ಆರ್ಥಿಕ ವರ್ಷದಲ್ಲಿ ಭಾರತೀಯ ರೈಲ್ವೆಯು ಅತ್ಯಂತ ಬಲಿಷ್ಠವಾದ ಪ್ರಗತಿಯನ್ನು ಸಾಧಿಸಿದೆ. ಈ ಅವಧಿಯಲ್ಲಿ ರೈಲ್ವೆಯು ದಾಖಲೆಯ 1,670 ಮಿಲಿಯನ್ ಟನ್ ಸರಕು ಸಾಗಣೆ ಮಾಡಿದ್ದಲ್ಲದೆ, ಬರೋಬ್ಬರಿ 7.41 ಬಿಲಿಯನ್ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಿ ಐತಿಹಾಸಿಕ ಸಾಧನೆಗೈದಿದೆ. ರೈಲ್ವೆ ಸಂಸ್ಥೆಯ ಈ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ನೌಕರರ ಶ್ರಮವನ್ನು ಗುರುತಿಸಿ, ಅವರ ಕಾರ್ಯದಕ್ಷತೆಯನ್ನು ಮತ್ತಷ್ಟು ಪ್ರೇರೇಪಿಸುವ ಉದ್ದೇಶದಿಂದ ಈ ವಾರ್ಷಿಕ ಬೋನಸ್ ಪಾವತಿಗೆ ಅನುಮೋದನೆ ನೀಡಲಾಗಿದೆ.



