ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವಾಲಯದಲ್ಲಿ ಭಾರತೀಯರನ್ನು ಗುರಿಯಾಗಿಸಿಕೊಂಡು ಸಾಮೂಹಿಕ ಗುಂಡಿನ ದಾಳಿ ಮಾಡಲು ಸಂಚು ರೂಪಿಸಿದ್ದ ಅಮೆರಿಕದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಅಮೆರಿಕದ ಇಲಿನಾಯ್ಸ್ನಲ್ಲಿರುವ ದೇವಸ್ಥಾನದಲ್ಲಿ ಭಾರತೀಯರನ್ನು ಟಾರ್ಗೆಟ್ ಮಾಡಿ, ಸಾಮೂಹಿಕವಾಗಿ ಗುಂಡಿನ ದಾಳಿ ನಡೆಸಲು ತಯಾರಿ ನಡೆಸಿದ್ದ 19 ವರ್ಷದ ಅಮೆರಿಕದ ಪ್ರಜೆ ಅಲೆಕ್ಸಾಂಡ್ರೋಸ್ ಪಾಪೊರಾಕಿಸ್ನನ್ನು ಬಂಧಿಸಲಾಗಿದೆ.
ಆತ ಗನ್ಗಳನ್ನು ತಯಾರು ಮಾಡಿಕೊಂಡು ಬಂದಿದ್ದ. ಕಡೆಯ ನಿಮಿಷದಲ್ಲಿ ರೈಫಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಜನರ ಪ್ರಾಣ ಉಳಿದಿದೆ. ಜೊತೆಗೆ ಆತ ನಡೆಸಿದ್ದ ಸಂಚು ಜನರ ಗಮನಕ್ಕೆ ಬಂದಿದೆ. ಪಾಲಟೈನ್ ನಿವಾಸಿಯಾಗಿರುವ ಅಲೆಕ್ಸಾಂಡ್ರೋಸ್ ಟಾಕೋ ಬೆಲ್ನಲ್ಲಿ ಕ್ಯಾಷಿಯರ್ ಆಗಿ ಕಾರ್ಯನಿರ್ವಿಸುತ್ತಿದ್ದ ಎಂದು ತಿಳಿದುಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಇಲಿನಾಯ್ಸ್ನ ಅರೋರಾ ನಗರದ ನೈಋತ್ಯ ಉಪನಗರದಲ್ಲಿರುವ ಅತಿದೊಡ್ಡ ಹಿಂದೂ ದೇವಾಲಯದಲ್ಲಿ ಭಾರತೀಯರನ್ನ ಗುರಿಯಾಗಿಸಿ ಸಾಮೂಹಿಕ ಗುಂಡಿನ ದಾಳಿ ನಡೆಸಲು ಈತ ಯೋಜಿಸಿದ್ದ. ಆತನ ಬಳಿ ರೈಫಲ್, 300 ಸುತ್ತುಗಳ ಗುಂಡುಗಳು, ರಕ್ಷಣಾ ಕವಚ, ಪೆಟ್ರೋಲ್ ಕ್ಯಾನ್ ಹಾಗೂ ಸ್ವಸ್ತಿಕ್ ಚಿಹ್ನೆಗಳಿದ್ದವು.
ರೈಫಲ್ ಹಾಳಾಗಿ ಗುಂಡು ಹಾರಿಸಲು ಸಾಧ್ಯವಾಗಿಲ್ಲ.ಇದನ್ನು ಹೇಗೆ ಸರಿಪಡಿಸಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಡಿದ್ದಾನೆ. ಇಷ್ಟೇ ಅಲ್ಲದೇ ಸಹೋದ್ಯೋಗಿಗೆ ಕರೆ ಮಾಡಿ ಭಾರತೀಯರನ್ನು ಕೊಲ್ಲುತ್ತೇನೆ ಎಂದೂ ಹೇಳಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.



