October 15, 2026
Thursday, October 15, 2026
spot_img

ಗಿರೀಶ್ ಕೊಲೆ ಪ್ರಕರಣಕ್ಕೆ ಮತ್ತೆ ಜೀವ: ಶುಭಾ, ಅರುಣ್ ವರ್ಮಾ ಕ್ಷಮಾದಾನ ಅರ್ಜಿ ಚರ್ಚೆಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯಾದ್ಯಂತ ಗಮನ ಸೆಳೆದಿದ್ದ 2003ರ ರಿಂಗ್ ರೋಡ್ ಗಿರೀಶ್ ಕೊಲೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.

ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಶುಭಾ ಶಂಕರನಾರಾಯಣ ಮತ್ತು ಡಿ. ಅರುಣ್ ವರ್ಮಾ ಸಲ್ಲಿಸಿರುವ ಕ್ಷಮಾದಾನ ಅರ್ಜಿಗಳ ಕುರಿತು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆಯಿದೆ. ರಾಜ್ಯಪಾಲರ ಮುಂದೆ ಸಲ್ಲಿಸಲಾಗಿರುವ ಈ ಅರ್ಜಿಗಳ ಬಗ್ಗೆ ಸರ್ಕಾರ ಯಾವ ನಿಲುವು ತಳೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಭಾವಿ ಪತಿ ಗಿರೀಶ್ ಕೊಲೆ ಪ್ರಕರಣದಲ್ಲಿ ದೋಷಿಗಳೆಂದು ತೀರ್ಪುಗೊಂಡಿರುವ ಶುಭಾ ಶಂಕರನಾರಾಯಣ ಮತ್ತು ಅರುಣ್ ವರ್ಮಾ, ಜೀವಾವಧಿ ಶಿಕ್ಷೆಯಿಂದ ವಿನಾಯಿತಿ ಕೋರಿ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ನಾಲ್ವರು ಆರೋಪಿಗಳಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದ ಬಳಿಕ ಈ ಅರ್ಜಿಗಳು ಮಹತ್ವ ಪಡೆದುಕೊಂಡಿವೆ.

ಸಂಪುಟ ಸಭೆಯಲ್ಲಿ ಅರ್ಜಿಗಳ ಕುರಿತು ಚರ್ಚೆ ನಡೆದ ನಂತರ ಸರ್ಕಾರ ಯಾವ ಸಲಹೆ ನೀಡಲಿದೆ ಎಂಬುದರ ಮೇಲೆ ಮುಂದಿನ ಬೆಳವಣಿಗೆಗಳು ಅವಲಂಬಿತವಾಗಿವೆ. ಕ್ಷಮಾದಾನ ನೀಡಬೇಕೇ ಅಥವಾ ಬೇಡವೇ ಎಂಬ ವಿಚಾರದಲ್ಲಿ ಸರ್ಕಾರದ ಅಭಿಪ್ರಾಯ ಏನಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಕರಣದ ಹಿನ್ನೆಲೆ ಏನು?

2003ರಲ್ಲಿ ಬೆಂಗಳೂರಿನ ರಿಂಗ್ ರೋಡ್‌ನಲ್ಲಿ ನಡೆದ ಗಿರೀಶ್ ಕೊಲೆ ಪ್ರಕರಣ ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಗಿರೀಶ್ ಮತ್ತು ಶುಭಾ ಶಂಕರನಾರಾಯಣ ಅವರ ವಿವಾಹ ನಿಶ್ಚಯವಾಗಿತ್ತು. ಎರಡೂ ಕುಟುಂಬಗಳ ನಡುವೆ ಹಿಂದಿನಿಂದಲೂ ಪರಿಚಯವಿತ್ತು. ಶುಭಾಗೆ ಅರುಣ್‌ ವರ್ಮಾ ಎನ್ನುವ ಜ್ಯೂನಿಯರ್‌ ಮೇಲೆ ಪ್ರೀತಿಯಿತ್ತು. ಹೀಗಾಗಿ 2003ರ ಡಿಸೆಂಬರ್ 3ರ ರಾತ್ರಿ ಗಿರೀಶ್ ತಮ್ಮ ಭಾವಿ ಪತ್ನಿ ಶುಭಾಳನ್ನು ಊಟಕ್ಕೆ ಕರೆದುಕೊಂಡು ಹೋಗಿದ್ದರು. ಬಳಿಕ ಎಚ್‌ಎಎಲ್ ವಿಮಾನ ನಿಲ್ದಾಣದ ಬಳಿ ವಿಮಾನಗಳ ಹಾರಾಟ ವೀಕ್ಷಿಸುವ ಆಸೆಯನ್ನು ಶುಭಾ ವ್ಯಕ್ತಪಡಿಸಿದ್ದರಿಂದ, ಗಿರೀಶ್ ಅವರನ್ನು ರಿಂಗ್ ರೋಡ್‌ನ ವೀಕ್ಷಣಾ ಸ್ಥಳಕ್ಕೆ ಕರೆದೊಯ್ದಿದ್ದರು ಎನ್ನಲಾಗಿದೆ.ಇಬ್ಬರೂ ವಿಮಾನಗಳ ಹಾರಾಟ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಗಿರೀಶ್ ಮೇಲೆ ದಾಳಿ ನಡೆದಿತ್ತು. ಆರೋಪಿಗಳು ಬೈಕ್‌ನ ಶಾಕ್ ಅಬ್ಸಾರ್ಬರ್‌ನಿಂದ ಅವರ ತಲೆಗೆ ಹೊಡೆದಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಗಿರೀಶ್‌ ಮೃತಪಟ್ಟಿದ್ದರು.

Must Read