ಹೊಸದಿಗಂತ ವರದಿ ಕಾರವಾರ:
ಯಕ್ಷಗಾನ ಕ್ಷೇತ್ರದ ಬಡಗುತಿಟ್ಟಿನ ಖ್ಯಾತ ಕಲಾವಿದ ಶ್ರೀಪಾದ ಭಟ್ಟ ಥಂಡಿಮನೆ(62) ಅವರು ಹೃದಯಾಘಾತದಿಂದ ನಿಧನರಾದರು. ಮೂತ್ರಪಿಂಡಗಳ ವೈಪಲ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿದೆ.
ಬಡಗಿನ ಯಕ್ಷರಂಗದಲ್ಲಿ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚಿನ ಕಾಲ ವೈವಿಧ್ಯಮಯ ವೇಷಗಳಿಂದ ರಂಜಿಸಿದ ಅವರು ತಮ್ಮ ಗತ್ತುಗಾರಿಕೆಯ ಕುಣಿತ,ಅಭಿನಯ ಮತ್ತು ಮಾತುಗಾರಿಕೆಯ ಮೂಲಕ ಯಕ್ಷಗಾನ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಬಡಗಿನ ಬಯಲಾಟ ಮೇಳಗಳು ಮತ್ತು ವೃತ್ತಿಪರ ಮೇಳಗಳಲ್ಲಿ ತಿರುಗಾಟ ನಡೆಸಿ ಪೌರಾಣಿಕ ಮತ್ತು ಸಾಮಾಜಿಕ ಪ್ರಸಂಗಗಳ ಖಳನಾಯಕ ಮತ್ತು ನಾಯಕ ವೇಷಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ವಿಶೇಷ ಛಾಪು ಮೂಡಿಸಿದ್ದರು. ಉತ್ತಮ ಮಾತುಗಾರರಾಗಿದ್ದ ಅವರು ಯಕ್ಷಗಾನ ವೇಷದ ಜೊತೆಗೆ ತಾಳಮದ್ದಲೆಯಲ್ಲೂ ಅರ್ಥಗಾರಿಕೆಯ ಮೂಲಕ ಖ್ಯಾತರಾಗಿದ್ದರು.
ಮೃತರು ತಂದೆ,ತಾಯಿ,ಪತ್ನಿ ಮತ್ತು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಅಗಲಿದ್ದು ತೆಂಕು ಬಡಗಿನ ಯಕ್ಷಗಾನ ಕಲಾವಿದರು, ವಿವಿಧ ಕ್ಷೇತ್ರಗಳ ಗಣ್ಯರು ಥಂಡಿ ಭಟ್ಟರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರ ಅಂತಿಮ ಸಂಸ್ಕಾರ ಅವರ ಊರು ಶಿರಸಿಯ ಥಂಡಿಮನೆಯಲ್ಲಿ ನಡೆಯಲಿದೆ.



