October 15, 2026
Thursday, October 15, 2026
spot_img

ಟೈರ್ ಪಂಕ್ಚರ್‌ನಿಂದ ಸುಟ್ಟು ಭಸ್ಮವಾದ BMW: 14 ವರ್ಷಗಳ ಬಳಿಕ ಮಾಲೀಕನಿಗೆ ಸಿಕ್ಕಿತು 70 ಲಕ್ಷ ರೂ. ಪರಿಹಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದಲ್ಲಿ ಟೈರ್ ಪಂಕ್ಚರ್ ಆಗಿದ್ದ BMW ಕಾರು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ ಬಳಿಕ ಬೆಂಕಿಗೆ ಆಹುತಿಯಾದ ಪ್ರಕರಣದಲ್ಲಿ, 14 ವರ್ಷಗಳ ಕಾನೂನು ಹೋರಾಟದ ನಂತರ ಕಾರಿನ ಮಾಲೀಕನಿಗೆ ನ್ಯಾಯ ಸಿಕ್ಕಿದೆ. ಹೌದು! ವಿಮೆ ನೀಡಲು ನಿರಾಕರಿಸಿದ್ದ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯು ಕಾರಿನ ವಿಮಾ ಮೊತ್ತ 70 ಲಕ್ಷದ ಜೊತೆಗೆ ಮಾನಸಿಕ ಕಿರುಕುಳಕ್ಕೆ 50,000 ಮತ್ತು ಕಾನೂನು ಹೋರಾಟದ ವೆಚ್ಚವಾಗಿ 25,000 ಪಾವತಿಸುವಂತೆ ಗ್ರಾಹಕ ಆಯೋಗ ಆದೇಶಿಸಿದೆ.

ಮಹಾರಾಷ್ಟ್ರದ ಧುಲ್ಖೇಡ್ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ನಡೆದ ಈ ಘಟನೆ ಈಗ ಗಮನ ಸೆಳೆದಿದೆ. 2012ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕ ಆಯೋಗವು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಗೆ ಬರೋಬ್ಬರಿ 70.75 ಲಕ್ಷ ಪರಿಹಾರ ಪಾವತಿಸುವಂತೆ ನಿರ್ದೇಶಿಸಿದೆ. ಇದರಲ್ಲಿ ಕಾರಿನ ವಿಮಾ ಮೊತ್ತದ ಜೊತೆಗೆ ಮಾನಸಿಕ ಕಿರುಕುಳಕ್ಕೆ ಪರಿಹಾರ ಮತ್ತು ಕಾನೂನು ಹೋರಾಟದ ವೆಚ್ಚವೂ ಸೇರಿವೆ.

ಇದನ್ನೂ ಓದಿ:

ಟೈರ್ ಪಂಕ್ಚರ್, ಮರುದಿನ ಸುಟ್ಟು ಕರಕಲಾದ ಕಾರು!

ರಾವಿಕಾಂತ್ ಎಸ್. ಪಾಟೀಲ್ ಎಂಬುವವರು 2012ರ ಮಾರ್ಚ್ 8ರಂದು ತಮ್ಮ BMW ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಟೈರ್ ಪಂಕ್ಚರ್ ಆಗಿತ್ತು. ತಡರಾತ್ರಿ ಹೆದ್ದಾರಿಯಲ್ಲಿ ಮೆಕ್ಯಾನಿಕ್ ಸಿಗದ ಕಾರಣ, ರಸ್ತೆ ಬದಿಯ ಧಾಬಾ ಬಳಿ ಕಾರನ್ನು ಸುರಕ್ಷಿತವಾಗಿ ನಿಲ್ಲಿಸಿದ್ದರು. ಬಳಿಕ ಕಾರಿನ ಬಾಗಿಲು ಮತ್ತು ಕಿಟಕಿಗಳನ್ನು ಭದ್ರಪಡಿಸಿ ಮತ್ತೊಂದು ವಾಹನದಲ್ಲಿ ಮನೆಗೆ ತೆರಳಿದ್ದರು. ಮರುದಿನ ಕಾರನ್ನು ವಾಪಸ್ ಪಡೆಯಲು ಬಂದಾಗ ಅದು ಸಂಪೂರ್ಣ ಸುಟ್ಟು ಕರಕಲಾಗಿತ್ತು.

ಈ ಘಟನೆ ಬಳಿಕ ಪಾಟೀಲ್ ವಿಮೆಗಾಗಿ ಕಂಪನಿಯನ್ನು ಸಂಪರ್ಕಿಸಿದ್ದರು. ಆದರೆ, ಕಾರನ್ನು ರಾತ್ರಿಯಿಡೀ ಯಾರೂ ಇಲ್ಲದೆ ಬಿಟ್ಟಿರುವುದು ವಿಮಾ ಪಾಲಿಸಿಯ ನಿಯಮಗಳ ಉಲ್ಲಂಘನೆ ಎಂದು ಆರೋಪಿಸಿ ಕಂಪನಿ ಕ್ಲೇಮ್ ತಿರಸ್ಕರಿಸಿತ್ತು. ಇದರಿಂದಾಗಿ ಅವರು ನ್ಯಾಯಕ್ಕಾಗಿ ಸುದೀರ್ಘ ಕಾನೂನು ಹೋರಾಟ ನಡೆಸಬೇಕಾಯಿತು.

ವಿಮಾ ಕಂಪನಿಗೆ ಗ್ರಾಹಕ ಆಯೋಗದ ತಿರುಗೇಟು

ವಿಮಾ ಕಂಪನಿಯ ವಾದವನ್ನು ಗ್ರಾಹಕ ಆಯೋಗ ತಳ್ಳಿಹಾಕಿದೆ. ಕೆಟ್ಟು ನಿಂತ ವಾಹನವನ್ನು ಯಾವುದೇ ಪರಿಸ್ಥಿತಿಯಲ್ಲೂ ಒಂಟಿಯಾಗಿ ಬಿಡಬಾರದು ಎಂಬ ನಿಯಮ ಪಾಲಿಸಿಯಲ್ಲಿ ಇರಲಿಲ್ಲ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಪಾಟೀಲ್ ಕಾರನ್ನು ರಸ್ತೆಯಿಂದ ಸುರಕ್ಷಿತವಾಗಿ ಬದಿಗೆ ನಿಲ್ಲಿಸಿ, ಬಾಗಿಲು ಮತ್ತು ಕಿಟಕಿಗಳನ್ನು ಭದ್ರಪಡಿಸುವ ಮೂಲಕ ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದರು ಎಂದು ಆಯೋಗ ಹೇಳಿದೆ.

ಅಲ್ಲದೆ, ಕಾರನ್ನು ಒಂಟಿಯಾಗಿ ಬಿಟ್ಟಿದ್ದೇ ಬೆಂಕಿ ಅವಘಡಕ್ಕೆ ನೇರ ಕಾರಣ ಎಂಬುದನ್ನು ಸಾಬೀತುಪಡಿಸುವ ನಿರ್ಣಾಯಕ ಸಾಕ್ಷ್ಯವೂ ಇರಲಿಲ್ಲ. ವಾಹನವನ್ನು ಕಾಯಲು ವ್ಯಕ್ತಿಯ ಸುರಕ್ಷತೆಯನ್ನೇ ಅಪಾಯಕ್ಕೆ ಒಡ್ಡಬೇಕೆಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಆಯೋಗ ಹೇಳಿದೆ.

70 ಲಕ್ಷ ವಿಮೆ, ಹೆಚ್ಚುವರಿ ಪರಿಹಾರವೂ ಮಂಜೂರು!

ಕಾರಿನ ವಿಮಾ ಘೋಷಿತ ಮೌಲ್ಯವಾದ 70 ಲಕ್ಷ ಪಾವತಿಸುವಂತೆ ಆಯೋಗ ಆದೇಶಿಸಿದೆ. ಜೊತೆಗೆ ಮಾನಸಿಕ ನೋವು ಮತ್ತು ಕಿರುಕುಳಕ್ಕೆ 50,000 ಹಾಗೂ ಕಾನೂನು ಹೋರಾಟದ ವೆಚ್ಚವಾಗಿ 25,000 ನೀಡುವಂತೆ ಸೂಚಿಸಿದೆ. ಹೀಗಾಗಿ ಬಡ್ಡಿ ಹೊರತುಪಡಿಸಿ ಒಟ್ಟು ಪರಿಹಾರ ಮೊತ್ತ 70.75 ಲಕ್ಷಕ್ಕೆ ತಲುಪಿದೆ.

Must Read