ಹೊಸದಿಗಂತ ಡಿಜಿಟಲ್ ಡೆಸ್ಕ್:
ದಸರಾ ಸಂದರ್ಭದಲ್ಲಿ ಬಲೂನ್ ಮಾರಾಟ ಮಾಡಲು ಕುಟುಂಬದೊಂದಿಗೆ ಮೈಸೂರಿಗೆ ಬಂದಿದ್ದ ಒಂಬತ್ತು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ತ್ವರಿತ ನ್ಯಾಯಾಲಯವು ಆರೋಪಿ ಕಾರ್ತಿಕ್ನನ್ನು ದೋಷಿ ಎಂದು ಘೋಷಿಸಿದೆ.
ನ್ಯಾಯಮೂರ್ತಿ ಅನಿಲ್ ಪಿ. ವಾಘಡೆ ಅವರ ನೇತೃತ್ವದ ತ್ವರಿತ ನ್ಯಾಯಾಲಯ-1 ಈ ತೀರ್ಪು ನೀಡಿದ್ದು, ಅಕ್ಟೋಬರ್ 16ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದೆ.
ಏನಿದು ಘಟನೆ?
ಕಳೆದ ವರ್ಷದ ದಸರಾ ಸಂದರ್ಭದಲ್ಲಿ ನಡೆದಿದ್ದ ಈ ಭೀಕರ ಘಟನೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಮೈಸೂರು ಅರಮನೆಯ ಎದುರಿನ ದೊಡ್ಡಕೆರೆ ಮೈದಾನದ ಸಮೀಪ ತಾತ್ಕಾಲಿಕವಾಗಿ ನೆಲೆಸಿದ್ದ ಬಾಲಕಿಯ ಕುಟುಂಬ ಬಲೂನ್ ಮತ್ತು ಆಟಿಕೆಗಳನ್ನು ಮಾರಾಟ ಮಾಡುತ್ತಿತ್ತು. ಇದೇ ವೇಳೆ, ಅಕ್ಟೋಬರ್ 9ರ ಮುಂಜಾನೆ ಬಾಲಕಿ ಕುಟುಂಬದಿಂದ ದೂರವಾಗಿದ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂಬುದು ಪ್ರಕರಣದ ಆರೋಪವಾಗಿತ್ತು.
ಇದನ್ನೂ ಓದಿ:
24 ಗಂಟೆಯೊಳಗೆ ಆರೋಪಿಯ ಬಂಧನ
ಘಟನೆ ಬೆಳಕಿಗೆ ಬಂದ ಬಳಿಕ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತನಿಖೆ ಚುರುಕುಗೊಳಿಸಿದ್ದರು. ಈ ಕಾರ್ಯಾಚರಣೆಯಲ್ಲಿ ಸಿದ್ದಲಿಂಗಪುರ ನಿವಾಸಿ, ಮೈಸೂರು–ಕೊಳ್ಳೇಗಾಲ ಮಾರ್ಗದಲ್ಲಿ ಬಸ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ 32 ವರ್ಷದ ಕಾರ್ತಿಕ್ನನ್ನು 24 ಗಂಟೆಯೊಳಗೆ ಬಂಧಿಸಲಾಗಿತ್ತು.
ಪ್ರಕರಣದ ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕಿ ಜಯಂತಿ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ವಿಚಾರಣೆಯಲ್ಲಿ ಮಂಡಿಸಲಾದ ಸಾಕ್ಷ್ಯಗಳು ಮತ್ತು ವಾದಗಳನ್ನು ಪರಿಶೀಲಿಸಿದ ನ್ಯಾಯಾಲಯವು ಆರೋಪಿಯನ್ನು ದೋಷಿ ಎಂದು ಘೋಷಿಸಿದೆ. ಇದೀಗ ಶಿಕ್ಷೆಯ ಪ್ರಮಾಣದ ಬಗ್ಗೆ ನ್ಯಾಯಾಲಯ ತೀರ್ಮಾನಿಸಬೇಕಿದೆ.



