ಹೊಸದಿಗಂತ ವರದಿ ಉಳ್ಳಾಲ:
ಲಲಿತ ಪಂಚಮಿಯಂದು ಕಟೀಲು ಕ್ಷೇತ್ರವಲ್ಲದೆ ಬಹುತೇಕ ಕ್ಷೇತ್ರಗಳಲ್ಲಿ ಭಕ್ತಾಧಿಗಳಿಗೆ ಶೇಷ ವಸ್ತ್ರಗಳನ್ನ ದಾನ ಮಾಡಲಾಗುತ್ತದೆ. ಇಂತಹ ಸುಸಂಧರ್ಭದಲ್ಲಿ ನಿಶಾನ್ ಪೂಜಾರಿಯವರು ದುರ್ಗಾ ಫ್ರೆಂಡ್ಸ್ ಮೂಲಕ ಮಹಿಳೆಯರಿಗೆ ಉಡುಗೊರೆಯಾಗಿ ನೀಡಿರುವುದು ವಿಶೇಷ ವಸ್ತ್ರವಾಗಿದ್ದು, ಸಮಾಜದ ಎಲ್ಲಾ ವರ್ಗದ ಜನರ ಜೊತೆಯಲ್ಲಿ ಬಾಳಬೇಕೆನ್ನುವ ಅವರ ಗುಣ ಶ್ರೇಷ್ಟವಾಗಿದೆಯೆಂದು ಮಂಗಳೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿಭಾಗ ಮುಖ್ಯಸ್ಥರು, ಸಾಹಿತಿ ಡಾ.ಅರುಣ್ ಉಳ್ಳಾಲ್ ಅಭಿಪ್ರಾಯಪಟ್ಟರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಳ್ಳಾಲದ ಶ್ರೀ ದುರ್ಗಾ ಫ್ರೆಂಡ್ಸ್ ಸಂಯೋಜನೆಯಲ್ಲಿ, ಶ್ರೀ ಈಶ್ವರಿ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಮಾಲಕರು ಹಾಗೂ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾದ ನಿಶಾನ್ ಪೂಜಾರಿ ಉಳ್ಳಾಲ ಅವರ ಜನ್ಮದಿನದ ಪ್ರಯುಕ್ತ ಉಳ್ಳಾಲ ಬೈಲಿನ ಗಾಣಿಗ ಭವನದಲ್ಲಿ ಗುರುವಾರದಂದು ನಡೆದ ಸರಳ ಕಾರ್ಯಕ್ರಮದಲ್ಲಿ ಪರಿಸರದ 300 ಮಹಿಳೆಯರಿಗೆ ಸೀರೆ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೀರೆ ಕೊಟ್ಟ ಕ್ಷಣ ನಿಮ್ಮ ಎಲ್ಲಾ ಕಷ್ಟ ನಿವಾರಣೆಯಾಗುತ್ತದೆಯೆಂದರ್ಥವಲ್ಲ. ಆದರೆ ತನ್ನ ಹುಟ್ಟು ಹಬ್ಬದ ಪ್ರಯುಕ್ತ ಇತರರ ಮುಖದಲ್ಲೂ ಸಂತಸ ಕಾಣುವ ಕಾರ್ಯವನ್ನು ನಡೆಸಿರುವುದು ಎಲ್ಲರಿಗೂ ಮಾದರಿಯಾಗಿದೆ. ಕಷ್ಟ, ಬಡತನವನ್ನು ಮಾನದಂಡವಾಗಿರಿಸದೆ ಪ್ರೀತಿಯಿಂದ ಕೊಟ್ಟಿರುವ ಈ ಉಡುಗೊರೆಯು ಸಮೃದ್ಧಿ, ಸುಮಂಗಳತೆಯ ಪ್ರತೀಕವಾಗಿದೆ. ಲಲಿತ ಪಂಚಮಿಯಂದೆ ನಿಶಾನ್ ಅವರು ಹುಟ್ಟುಹಬ್ಬ ಆಚರಿಸಿರುವುದು ಅವರ ಅದೃಷ್ಟವಾಗಿದೆ. ಈ ಕಾರ್ಯವನ್ನು ಪಕ್ಷ ಸಂಘಟನೆ ಮೂಲಕ ಮಾಡಿದರೆ ಅವರ ಪದೋನ್ನತಿಗೂ ಅನುಕೂಲಕರವಾಗುತ್ತಿತ್ತು. ಆದರೆ ಇಂತಹ ಸಮಾಜ ಮುಖಿ ಕಾರ್ಯಕ್ಕಾಗಿ ದುರ್ಗಾ ಫ್ರೆಂಡ್ಸನ್ನೇ ಆಯ್ಕೆ ಮಾಡಿರುವುದು ಅವರ ಸರಳತೆಗೆ ಸಾಕ್ಷಿಯಾಗಿದೆಯೆಂದರು.
ಈ ಸಂದರ್ಭದಲ್ಲಿ ಮಾತನಾಡಿದ ನಿಶಾನ್ ಪೂಜಾರಿ, ವಿಶೇಷವಾಗಿ ಹುಟ್ಟು ಹಬ್ಬವನ್ನು ಆಚರಿಸಲು ದುರ್ಗಾ ಫ್ರೆಂಡ್ಸ್ ನ ಸದಸ್ಯರು ಅವಕಾಶ ಕಲ್ಪಿಸಿ ಕೊಟ್ಟಿರುವುದು ಸಂತಸ ನೀಡಿದೆ. ನನ್ನ ದುಡಿಮೆಯ ಪಾಲಿನ ಒಂದಂಶವನ್ನು ಸಮಾಜಕ್ಕೆ ವಿನಿಯೋಗಿಸುವ ಸದುದ್ಧೇಶದಿಂದ ಈ ಸಮಾಜಮುಖಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಉಳ್ಳಾಲ ಪರಿಸರದಲ್ಲಿ ಸದಾ ಸಮಾಜಮುಖಿ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿರುವ ದುರ್ಗಾ ಫ್ರೆಂಡ್ಸ್ ಸಂಸ್ಥೆಗೆ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿ ಎಂದು ಹಾರೈಸಿದರು.
ಈ ವೇಳೆ ವಿದ್ಯಾರ್ಥಿನಿಯರಾದ ಜಾಹ್ನವಿ, ಯಜ್ನ, ತ್ರಿಶಾ ಉಳ್ಳಾಲ್, ಕಾವ್ಯ, ಲಹರಿ ಸುವರ್ಣ ಅವರ ಶಿಕ್ಷಣಕ್ಕೆ ಪ್ರೋತ್ಸಾಹ ಧನ ನೀಡಲಾಯಿತು.
ದುರ್ಗಾ ಫ್ರೆಂಡ್ಸ್ ವತಿಯಿಂದ ನಿಶಾನ್ ಪೂಜಾರಿಯವರನ್ನ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ನಿಶಾನ್ ಅವರ ಪತ್ನಿ ನಿಖಿತಾ ನಿಶಾನ್ ಪೂಜಾರಿ, ತಂದೆ ಪುರಂದರದಾಸ್, ತಾಯಿ ಹರಿಣಾಕ್ಷಿ, ಸಹೋದರಿ ನಿಫಾಲಿ, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ದುರ್ಗಾ ಫ್ರೆಂಡ್ಸ್ ನ ಅಧ್ಯಕ್ಷರಾದ ದೀಪಕ್ ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಉಳ್ಳಾಲ್, ಉಪಾಧ್ಯಕ್ಷರಾದ ನಿತಿನ್, ರವಿ, ಕಾರ್ಯದರ್ಶಿ ಯೋಗೀಶ್, ಪ್ರಮುಖರಾದ ಲತೇಶ್ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.



