ಹೊಸದಿಗಂತ ವರದಿ ಹಾಸನ :
ಗಾಂಜಾ ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೂಲಿ ಕಾರ್ಮಿಕರ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಮಹಿಳೆಯರು ಹಾಗೂ ಪುರುಷರು ರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡ ಘಟನೆ ಸಕಲೇಶಪುರ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಕೂಲಿ ಕೆಲಸಕ್ಕಾಗಿ ಆಗಮಿಸಿರುವ ಕಾರ್ಮಿಕರ ನಡುವೆ ಕಳೆದ ಮೂರ್ನಾಲ್ಕು ದಿನಗಳಿಂದ ಗಲಾಟೆ ನಡೆಯುತ್ತಿದೆ, ಗುರುವಾರವೂ ರಸ್ತೆಯಲ್ಲೇ ಹೊಡೆದಾಟ ನಡೆದಿದೆ. ಈ ವೇಳೆ ವಾಹನಗಳು ಸಂಚರಿಸುತ್ತಿದ್ದರೂ ಅದನ್ನು ಲೆಕ್ಕಿಸದೆ ಕಾರ್ಮಿಕರು ಪರಸ್ಪರ ಬಡಿದಾಡಿಕೊಂಡಿದ್ದಾರೆ.
ಮೂರ್ನಾಲ್ಕು ದಿನಗಳ ಹಿಂದೆ ಪೊಲೀಸರು 750 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಗಾಂಜಾ ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಲಾಗಿದೆ. ಈ ಘಟನೆಯ ಬೆನ್ನಲ್ಲೇ ಕಾರ್ಮಿಕರ ನಡುವೆ ಗಲಾಟೆ ತೀವ್ರಗೊಂಡಿದೆ.
ಹೊಸೂರು ಗ್ರಾಮದಲ್ಲಿ ಅಸ್ಸಾಂ ಮೂಲದವರೆಂದು ಹೇಳಿಕೊಳ್ಳುವ ನೂರಾರು ಕಾರ್ಮಿಕರು ಕೂಲಿ ಕೆಲಸಕ್ಕಾಗಿ ಆಗಮಿಸಿದ್ದು, ಗಾಂಜಾ ಮಾರಾಟ ಹಾಗೂ ಹೊರಗಿನಿಂದ ಬಂದಿರುವ ಕಾರ್ಮಿಕರ ಚಟುವಟಿಕೆಗಳ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಮದಲ್ಲಿ ಪದೇಪದೇ ಗಲಾಟೆಗಳು ನಡೆಯುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ.
ರಸ್ತೆಯಲ್ಲಿ ಮಹಿಳೆಯರು ಹಾಗೂ ಪುರುಷರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಸಾರ್ವಜನಿಕರ ಸುರಕ್ಷತೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



