October 16, 2026
Friday, October 16, 2026
spot_img

‘ಲೆಹ್ರಾ ದೋ ತಿರಂಗಾ’ ಮೆರವಣಿಗೆಗೆ ಬ್ರೇಕ್‌?: ಸಿಜೆಪಿ ನಾಯಕ ಅಭಿಜೀತ್‌ ದೀಪ್ಕೆಗೆ ದೆಹಲಿ ಪೊಲೀಸರಿಂದ ನೋಟಿಸ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರಧ್ವಜ ಹಿಡಿದು ಮೆರವಣಿಗೆ ನಡೆಸುವ ವಿಚಾರವಾಗಿ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಮತ್ತು ದೆಹಲಿ ಪೊಲೀಸರ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.

ಸಿಜೆಪಿ ಸಂಸ್ಥಾಪಕ ಅಭಿಜೀತ್‌ ದೀಪ್ಕೆ ಆಯೋಜಿಸಲು ಉದ್ದೇಶಿಸಿದ್ದ ‘ಲೆಹ್ರಾ ದೋ ತಿರಂಗಾ’ ಮೆರವಣಿಗೆಗೆ ಮುನ್ನ ಪೊಲೀಸರು ಅವರು ವಾಸ್ತವ್ಯ ಹೂಡಿದ್ದ ಮಧ್ಯ ದೆಹಲಿಯ ನಿವಾಸಕ್ಕೆ ತೆರಳಿ ನೋಟಿಸ್‌ ನೀಡಿದ್ದಾರೆ. ಮೆರವಣಿಗೆಯಲ್ಲಿ ಭಾಗವಹಿಸದಂತೆ ಸೂಚಿಸಿದ್ದಾರೆ.

ರಾಷ್ಟ್ರಧ್ವಜ ಹಿಡಿಯುವುದಕ್ಕೂ ನಿರ್ಬಂಧವೇ?

ಶುಕ್ರವಾರ ದೀಪ್ಕೆ ಅವರ ನಿವಾಸಕ್ಕೆ ತೆರಳಿದ ಮಹಿಳಾ ಸಿಬ್ಬಂದಿ ಸೇರಿದಂತೆ ಹಲವು ಪೊಲೀಸ್‌ ಅಧಿಕಾರಿಗಳು, ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ನೋಟಿಸ್‌ ನೀಡಿದ್ದಾರೆ. ಈ ವೇಳೆ ಮಹಾತ್ಮ ಗಾಂಧೀಜಿ ಚಿತ್ರವಿರುವ ಬಿಳಿ ಟಿ-ಶರ್ಟ್‌ ಧರಿಸಿ, ಹೆಗಲ ಮೇಲೆ ತ್ರಿವರ್ಣ ಧ್ವಜ ಹೊದ್ದುಕೊಂಡಿದ್ದ ದೀಪ್ಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಹಿಂಸಾಚಾರಕ್ಕೆ ಕರೆ ನೀಡಿರುವುದಕ್ಕೆ ಸಾಕ್ಷಿ ತೋರಿಸುವಂತೆ ಪ್ರಶ್ನಿಸಿದ ಅವರು, ತಮ್ಮ ಉದ್ದೇಶ ಪ್ರತಿಭಟನೆ ನಡೆಸುವುದಲ್ಲ, ರಾಷ್ಟ್ರಧ್ವಜ ಹಾರಿಸುವುದಷ್ಟೇ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಸೆಕ್ಷನ್‌ 29ರ ಅಡಿಯಲ್ಲಿ ದೀಪ್ಕೆಗೆ ನೋಟಿಸ್‌

ದೆಹಲಿ ಪೊಲೀಸ್‌ ಕಾಯ್ದೆಯ ಸೆಕ್ಷನ್‌ 29ರ ಅಡಿಯಲ್ಲಿ ನೋಟಿಸ್‌ ನೀಡಲಾಗಿದೆ ಎಂದು ವರದಿಯಾಗಿದೆ. ಕನ್ನಾಟ್‌ ಪ್ಲೇಸ್‌ ಸುತ್ತಮುತ್ತ ಯಾವುದೇ ರೀತಿಯ ಪ್ರತಿಭಟನೆ ಅಥವಾ ಸಾರ್ವಜನಿಕ ರ‍್ಯಾಲಿ ನಡೆಸದಂತೆ ಅದರಲ್ಲಿ ಸೂಚಿಸಲಾಗಿದೆ. ಆದರೆ ದೀಪ್ಕೆ ಅವರನ್ನು ಬಂಧಿಸಲಾಗಿದೆಯೇ ಅಥವಾ ಗೃಹಬಂಧನದಲ್ಲಿಡಲಾಗಿದೆಯೇ ಎಂಬ ಬಗ್ಗೆ ಪೊಲೀಸರಿಂದ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ.

6,000ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ

ಸಿಜೆಪಿ ನಾಯಕರು ರಾಷ್ಟ್ರಧ್ವಜದೊಂದಿಗೆ ಜಮಾಯಿಸಲು ಕರೆ ನೀಡಿದ್ದ ಕನ್ನಾಟ್‌ ಪ್ಲೇಸ್‌ನ ಸೆಂಟ್ರಲ್‌ ಪಾರ್ಕ್‌ ಸುತ್ತ ಭದ್ರತೆ ಹೆಚ್ಚಿಸಲಾಗಿದೆ. ಸುಮಾರು 6,000 ಪೊಲೀಸ್‌ ಮತ್ತು ಅರೆಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ. ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವುದಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಪ್ರಸ್ತಾವಿತ ಸಭಾಸ್ಥಳವಾದ ಸೆಂಟ್ರಲ್‌ ಪಾರ್ಕ್‌ ಅನ್ನು ಎರಡು ದಿನಗಳ ಕಾಲ ಮುಚ್ಚಲಾಗಿದೆ.

ಇದಕ್ಕೂ ಮೊದಲು ಸಿಜೆಪಿ ನಾಯಕರಾದ ಸೌರವ್‌ ದಾಸ್‌ ಮತ್ತು ಆಶುತೋಷ್‌ ರಾಂಕಾ ಅವರನ್ನು ಜಂತರ್‌ ಮಂತರ್‌ ಪ್ರದೇಶದಲ್ಲಿ ರಾಷ್ಟ್ರಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು. ಬಳಿಕ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ದೀಪ್ಕೆ ಮೆರವಣಿಗೆಗೆ ಕರೆ ನೀಡಿದ್ದರು.

11 ಮಂದಿಯ ತಂಡಕ್ಕೆ ಅವಕಾಶ

ಮೆರವಣಿಗೆಗೆ ಅನುಮತಿ ನೀಡದಿದ್ದರೂ, ಸೂಕ್ತ ಸ್ಥಳದಲ್ಲಿ 11 ಮಂದಿಯ ತಂಡಕ್ಕೆ ರಾಷ್ಟ್ರಧ್ವಜ ಹಿಡಿದು ರಾಷ್ಟ್ರಗೀತೆ ಹಾಡಲು ಅವಕಾಶ ನೀಡುವ ಸಾಧ್ಯತೆಯನ್ನು ಪೊಲೀಸರು ಸೂಚಿಸಿದ್ದಾರೆ ಎಂದು ವರದಿಯಾಗಿದೆ.

Must Read