October 16, 2026
Friday, October 16, 2026
spot_img

ಕೊಯಮತ್ತೂರಿನಲ್ಲಿ 300 ಕೋಟಿ ವೆಚ್ಚದ ‘ಪೆರಿಯಾರ್ ಅರಿವುಳಗಂ’ ವಿಜ್ಞಾನ ಕೇಂದ್ರ ಉದ್ಘಾಟಿಸಿದ ಸಿಎಂ ವಿಜಯ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳುನಾಡಿನ ಸಾಂಸ್ಕೃತಿಕ ನಗರಿ ಕೊಯಮತ್ತೂರಿನಲ್ಲಿ ನಿರ್ಮಾಣವಾಗಿರುವ ಬೃಹತ್ ಜ್ಞಾನ ಭಂಡಾರವು ಸಾರ್ವಜನಿಕ ಮುಕ್ತವಾಗಿದೆ. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಶುಕ್ರವಾರ ಕೊಯಮತ್ತೂರಿನಲ್ಲಿ ಬರೋಬ್ಬರಿ 300 ಕೋಟಿ ರೂ. ವೆಚ್ಚದಲ್ಲಿ ತಲೆಎತ್ತಿರುವ ‘ಪೆರಿಯಾರ್ ಅರಿವುಳಗಂ ಮತ್ತು ವಿಜ್ಞಾನ ಕೇಂದ್ರ’ವನ್ನು ಅಧಿಕೃತವಾಗಿ ಉದ್ಘಾಟಿಸಿದ್ದಾರೆ.

ಮೇ ತಿಂಗಳಿನಲ್ಲಿ ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಕೊಯಮತ್ತೂರಿಗೆ ಆಗಮಿಸಿದ ಸಿಎಂ ವಿಜಯ್ ಅವರಿಗೆ ವಿಮಾನ ನಿಲ್ದಾಣದಿಂದ ಗಾಂಧಿಪುರದವರೆಗೆ ನಡೆದ 11.4 ಕಿ.ಮೀ. ಉದ್ದದ ಭರ್ಜರಿ ರೋಡ್ ಶೋ ವೇಳೆ ಹತ್ತಾರು ಸಾವಿರ ಅಭಿಮಾನಿಗಳು ಹಾಗೂ ಟಿವಿಕೆ ಪಕ್ಷದ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು.

ಯೋಜನೆ ರೂಪಿಸಿದ್ದು ನಾವು: ಸ್ಟಾಲಿನ್ ವಾಗ್ದಾಳಿ

ವಿಜ್ಞಾನ ಕೇಂದ್ರದ ಉದ್ಘಾಟನೆಗೆ ಕೆಲವೇ ಗಂಟೆಗಳ ಮುಂಚಿತವಾಗಿ ತಮಿಳುನಾಡಿನ ರಾಜಕಾರಣದಲ್ಲಿ ಭಾರಿ ಹೈ-ಡ್ರಾಮಾ ಸೃಷ್ಟಿಯಾಯಿತು. ಡಿಎಂಕೆ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಬಿಡುಗಡೆ ಮಾಡಿ, “ಈ ಭವ್ಯ ಯೋಜನೆಯು ನಮ್ಮ ‘ದ್ರಾವಿಡ ಮಾಡೆಲ್ ಸರ್ಕಾರದ’ ಕನಸಿನ ಕೂಸಾಗಿದೆ. ಯಾರು ಇದನ್ನು ಉದ್ಘಾಟಿಸುತ್ತಾರೆ ಎಂಬುದು ಮುಖ್ಯವಲ್ಲ, ಅದನ್ನು ಯೋಜಿಸಿ ಮತ್ತು ಅತ್ಯಂತ ವಿಶಿಷ್ಟವಾಗಿ ರೂಪಿಸುವುದರಲ್ಲಿ ನಿಜವಾದ ಹೆಮ್ಮೆ ಇದೆ. ಆ ಹೆಮ್ಮೆ ಎಂದಿಗೂ ಡಿಎಂಕೆ ಪಕ್ಷಕ್ಕೆ ಸಲ್ಲುತ್ತದೆ” ಎಂದು ಗುಡುಗಿದರು. ನವೆಂಬರ್ 6, 2024 ರಂದು ಸ್ಟಾಲಿನ್ ಅವರೇ ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು ಮತ್ತು ಡಿಎಂಕೆ ಸರ್ಕಾರದ ಅವಧಿಯಲ್ಲೇ ಸಾರ್ವಜನಿಕ ಲೋಕೋಪಯೋಗಿ ಇಲಾಖೆಯು ಇದರ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿತ್ತು.

300 ಕೋಟಿ ವೆಚ್ಚದ ಜ್ಞಾನ ಪ್ರಪಂಚದಲ್ಲಿ ಏನೇನಿದೆ?

ಖ್ಯಾತ ಸಮಾಜ ಸುಧಾರಕ ಇ.ವಿ. ರಾಮಸಾಮಿ (ಪೆರಿಯಾರ್) ಅವರ ಹೆಸರಿಡಲಾಗಿರುವ ಈ ಬೃಹತ್ ಕೇಂದ್ರವು 7 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿದೆ. ಇದರ ಒಟ್ಟು ವೆಚ್ಚದಲ್ಲಿ 245 ಕೋಟಿ ರೂ.ಗಳನ್ನು ಕಟ್ಟಡ ನಿರ್ಮಾಣಕ್ಕೆ ಹಾಗೂ 50 ಕೋಟಿ ರೂ.ಗಳನ್ನು ಪುಸ್ತಕಗಳು ಮತ್ತು ಇ-ಪುಸ್ತಕಗಳಿಗಾಗಿ ಬಳಸಲಾಗಿದೆ.

ಈ ಕೇಂದ್ರದಲ್ಲಿ 1.25 ಲಕ್ಷಕ್ಕೂ ಹೆಚ್ಚು ಭೌತಿಕ ಪುಸ್ತಕಗಳು, ಡಿಜಿಟಲ್ ಲೈಬ್ರರಿ, ಮಕ್ಕಳ ಗ್ರಂಥಾಲಯ ಹಾಗೂ ಸುಂದರವಾದ ಓದುವ ಕೋಣೆಗಳಿವೆ. ಯುಪಿಎಸ್‌ಸಿ ಮತ್ತು ಟಿಎನ್‌ಪಿಎಸ್‌ಸಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಬಡ ವಿದ್ಯಾರ್ಥಿಗಳಿಗಾಗಿ ವಿಶೇಷ ಅಧ್ಯಯನ ಸಭಾಂಗಣಗಳು ಮತ್ತು ಉಚಿತ ಪುಸ್ತಕ ಸಾಮಗ್ರಿಗಳನ್ನು ಒದಗಿಸಲಾಗಿದೆ. ಈ ಬೃಹತ್ ತಾರಾಲಯ, ಸಂವಾದಾತ್ಮಕ ವಿಜ್ಞಾನ ಕೇಂದ್ರ ಹಾಗೂ ಶೈಕ್ಷಣಿಕ ಸೆಮಿನಾರ್‌ಗಳನ್ನು ನಡೆಸಲು ಅತ್ಯಾಧುನಿಕ ಆಡಿಟೋರಿಯಂ ವ್ಯವಸ್ಥೆ ಇಲ್ಲಿದೆ.

ಮುಖ್ಯಮಂತ್ರಿ ವಿಜಯ್ ಅವರು ಉದ್ಘಾಟನಾ ಸಮಾರಂಭದ ಬಳಿಕ ಇಡೀ ಕೇಂದ್ರದ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಎರಡನೇ ಮಹಡಿಯಲ್ಲಿ ಕಾರ್ಪೊರೇಷನ್ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಖುಷಿಪಟ್ಟರು. ಸಿಎಂ ಭೇಟಿಯ ಹಿನ್ನೆಲೆಯಲ್ಲಿ ಇಡೀ ಕೊಯಮತ್ತೂರು ನಗರದಾದ್ಯಂತ 3,500 ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು ಮತ್ತು ಡ್ರೋನ್ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.

Must Read