ಹೊಸದಿಗಂತ ವರದಿ ಬೆಳಗಾವಿ:
ರಾಜ್ಯ ಸರ್ಕಾರದ 2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ “ಸಶಕ್ತ ಕರ್ನಾಟಕ” ಕಾರ್ಯಕ್ರಮದಡಿ ರಾಜ್ಯದ ನಾಲ್ಕು ಪ್ರಮುಖ ಸ್ಥಳಗಳಲ್ಲಿ ರಾಷ್ಟ್ರ ಮಟ್ಟದ ಮ್ಯಾರಥಾನ್ ಆಯೋಜಿಸಲಾಗಿದೆ. ಬೆಳಗಾವಿಯಲ್ಲಿ ಅಕ್ಟೋಬರ್ 25 ರಂದು ರಾಷ್ಟ್ರ ಮಟ್ಟದ ಮ್ಯಾರಥಾನ್ ನಡೆಯಲಿದ್ದು, ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ “ಸಶಕ್ತ ಕರ್ನಾಟಕ” ಕಾರ್ಯಕ್ರಮದಡಿ ಆಯೋಜಿಸಲಾದ ರಾಷ್ಟ್ರ ಮಟ್ಟದ ಮ್ಯಾರಥಾನ್ ಕುರಿತು ಅವರು ಮಾಹಿತಿ ನೀಡಿದರು.
ಬೆಳಗಾವಿ, ಹಂಪಿ, ಮುರಡೇಶ್ವರ ಮತ್ತು ಚಿತ್ರದುರ್ಗಗಳಲ್ಲಿ ರಾಷ್ಟ್ರ ಮಟ್ಟದ ಮ್ಯಾರಾಥಾನ್ ಆಯೋಜಿಸಲಾಗುತ್ತಿದೆ.
ಬೆಳಗಾವಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ ವತಿಯಿಂದ ಜೆ.ಜೆ.ಅಕ್ಟಿವ್ ಬೆಂಗಳೂರು ಇವರ ಸಹಯೋಗದಲ್ಲಿ ಅಕ್ಟೋಬರ್ 25 ರಂದು ರಾಷ್ಟ್ರ ಮಟ್ಟದ ಮ್ಯಾರಾಥಾನ್ ಆಯೋಜಿಸಲಾಗುತ್ತಿದೆ.
ಇದರಲ್ಲಿ 5 ಕಿ.ಮೀ, 10 ಕಿ.ಮೀ ಮತ್ತು 21 ಕಿ.ಮೀ ಹಾಫ್ ಮ್ಯಾರಾಥಾನ್ ಬೆಳಗಾವಿಯ ಸುವರ್ಣಸೌಧದಿಂದ ಪ್ರಾರಂಭಗೊಂಡು ನಗರದ ಕೋಟೆ ಕೆರೆ ಮಾರ್ಗವಾಗಿ ಮತ್ತೆ ಸುವರ್ಣಸೌಧದ ಮುಂಭಾಗದಲ್ಲಿ ಮುಕ್ತಾಯಗೊಳ್ಳಲಿದೆ. ಭಾಗವಹಿಸುವ ಎಲ್ಲ ಕ್ರೀಡಾಪಟುಗಳಿಗೆ ಟೀ-ಶರ್ಟ್ ಹಾಗೂ ಮೆಡಲ್ ನೀಡಲಾಗುವುದು. ಕ್ರೀಡಾಪಟುಗಳಿಗೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿರುತ್ತದೆ.
21 ಕಿಮೀ ಹಾಫ್ ಮ್ಯಾರಾಥಾನ್ ವಿಭಾಗದಲ್ಲಿ (18 ರಿಂದ 45 ವರ್ಷದೊಳಗಿನ) ವಿಜೇತರಿಗೆ ಪ್ರಥಮ ಬಹುಮಾನ ರೂ.7,500, ದ್ವಿತೀಯ ಬಹುಮಾನ ರೂ.5,000, ತೃತೀಯ ಬಹುಮಾನ ರೂ.3,000 ಗಳನ್ನು ಹಾಗೂ ಟ್ರೋಫಿಗಳನ್ನು ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ನೀಡಲಾಗುವುದು.
21 ಕಿ.ಮೀ ಹಾಫ್ ಮ್ಯಾರಾಥಾನ್ ವಿಭಾಗದಲ್ಲಿ (45 ವರ್ಷ ಮೇಲ್ಪಟ್ಟವರಿಗೆ) ವಿಜೇತರಿಗೆ ಪ್ರಥಮ ಬಹುಮಾನ ರೂ.5,000, ದ್ವಿತೀಯ ಬಹುಮಾನ ರೂ.3.500, ತೃತೀಯ ಬಹುಮಾನ ರೂ.2.500 ಗಳನ್ನು ಹಾಗೂ ಟ್ರೋಫಿಗಳನ್ನು ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ನೀಡಲಾಗುವುದು.
ಅದೇ ರೀತಿಯಲ್ಲಿ 10 ಕಿ.ಮೀ ಮ್ಯಾರಾಥಾನ್ ವಿಭಾಗದಲ್ಲಿ (18 ರಿಂದ 45 ವರ್ಷದೊಳಗಿನ) ವಿಜೇತರಿಗೆ ಪ್ರಥಮ ಬಹುಮಾನ ರೂ.5,000, ದ್ವಿತೀಯ ಬಹುಮಾನ ರೂ.3,500, ತೃತೀಯ ಬಹುಮಾನ ರೂ.2,500 ಗಳನ್ನು ಹಾಗೂ ಟ್ರೋಫಿಗಳನ್ನು ನೀಡಲಾಗುವುದು.
10 ಕಿ.ಮೀ ಮ್ಯಾರಾಥಾನ್ ವಿಭಾಗದಲ್ಲಿ (45 ವರ್ಷ ಮೇಲ್ಪಟ್ಟವರಿಗೆ) ವಿಜೇತರಿಗೆ ಪ್ರಥಮ ಬಹುಮಾನ ರೂ.3,000, ದ್ವಿತೀಯ ಬಹುಮಾನ ರೂ.2,000, ತೃತೀಯ ಬಹುಮಾನ ರೂ.1,500 ಗಳನ್ನು ಹಾಗೂ ಟ್ರೋಫಿಗಳನ್ನು ನೀಡಲಾಗುವುದು.
ಇದನ್ನೂ ಓದಿ:
ಮ್ಯಾರಾಥಾನ್ನಲ್ಲಿ ಭಾಗವಹಿಸುವವರು ಆನ್ಲೈನ್ ಪೋರ್ಟಲ್ https://raceiq.in/belagavirun ಮೂಲಕ 5 ಕಿ.ಮೀ ರೂ.350, 10 ಕಿಮೀ ರೂ.600 ಹಾಗೂ 21 ಕಿಮೀ ರೂ.800 ಗಳ ಪ್ರವೇಶ ಶುಲ್ಕವನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರೀಕರಿಗೆ ಪ್ರವೇಶ ಶುಲ್ಕದಲ್ಲಿ ಶೇಕಡಾ 25% ರಿಯಾಯಿತಿ ನೀಡಲಾಗಿದೆ.
ಕ್ರೀಡಾಪಟುಗಳು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಮ್ಯಾರಾಥಾನ್ನಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟದ ಮ್ಯಾರಥಾನ್ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.



