ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ತೆರೆಕಂಡು ಭಾರಿ ಸದ್ದು ಮಾಡುತ್ತಿರುವ ‘ರಣಬಾಲಿ’ ಚಿತ್ರದ ಸುತ್ತ ಹರಿದಾಡುತ್ತಿರುವ ನೆಗೆಟಿವ್ ರಿವ್ಯೂಗಳು ಹಾಗೂ ಸುಳ್ಳು ಸುದ್ದಿಗಳ ವಿರುದ್ಧ ಚಿತ್ರತಂಡ ನ್ಯಾಯಾಲಯದ ಮೆಟ್ಟಿಲೇರಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯ, ರಾಹುಲ್ ಸಂಕೃತ್ಯನ್ ನಿರ್ದೇಶನದ ಈ ಸಿನಿಮಾದ ಬಿಡುಗಡೆಗೂ ಮುನ್ನವೇ ಕೆಲವರು ಉದ್ದೇಶಪೂರ್ವಕವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ಬೆಂಗಳೂರು ಮತ್ತು ಮದ್ರಾಸ್ ನ್ಯಾಯಾಲಯಗಳು ಚಿತ್ರದ ಪರವಾಗಿ ಮಹತ್ವದ ಮಧ್ಯಂತರ ತೀರ್ಪುಗಳನ್ನು ನೀಡಿವೆ.
ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳಷ್ಟಿದೆ ಎನ್ನುವಾಗ, ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿದ್ದ ಅಪಪ್ರಚಾರ ಮತ್ತು ಸುಳ್ಳು ಮಾಹಿತಿಗಳನ್ನು ತಡೆಯುವಂತೆ ಕೋರಿ ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವಿ ಮೇಕರ್ಸ್’ ಬೆಂಗಳೂರು ನ್ಯಾಯಾಲಯದ ಮೊರೆಹೋಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಚಿತ್ರದ ವಿರುದ್ಧ ಮಾನಹಾನಿಕರ ಹಾಗೂ ಸುಳ್ಳು ಸುದ್ದಿ ಪ್ರಕಟಿಸದಂತೆ ಎಕ್ಸ್ , ಯೂಟ್ಯೂಬ್, ಗೂಗಲ್, ಬುಕ್ ಮೈ ಶೋ, ಐಎಮ್ಡಿಬಿ, ಫೇಸ್ಬುಕ್ ಹಾಗೂ ಮೆಟಾ ಸಂಸ್ಥೆಗಳಿಗೆ ಎಕ್ಸ್ಪಾರ್ಟೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
ನ್ಯಾಯಾಲಯದ ಈ ಆದೇಶದ ಬೆನ್ನಲ್ಲೇ, ಮುಂಚೂಣಿ ಟಿಕೆಟಿಂಗ್ ಪ್ಲಾಟ್ಫಾರ್ಮ್ ಆದ ‘ಬುಕ್ ಮೈ ಶೋ’ ರಣಬಾಲಿ ಸಿನಿಮಾದ ವಿಮರ್ಶೆಗಳು ಮತ್ತು ರೇಟಿಂಗ್ಗಳನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿದೆ. “ನ್ಯಾಯಾಲಯದ ಆದೇಶದ ಅನುಸಾರ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಅಪ್ಲಿಕೇಶನ್ನಲ್ಲಿ ಡಿಸ್ಕ್ಲೈಮರ್ ಕೂಡ ನೀಡಲಾಗಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಕೆಲವರು ಉದ್ದೇಶಪೂರ್ವಕವಾಗಿ ಸಿನಿಮಾವನ್ನು ತುಳಿಯಲು ಯತ್ನಿಸುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಸಾಮಾಜಿಕ ಜಾಲತಾಣಗಳ ಮೇಲಿನ ತಡೆಯಾಜ್ಞೆಯ ಜೊತೆಗೆ, ಮದ್ರಾಸ್ ಉಚ್ಚ ನ್ಯಾಯಾಲಯದಿಂದ ಚಿತ್ರತಂಡಕ್ಕೆ ಜಾನ್ ಡೋ ಆಂಟಿ-ಪೈರಸಿ ಇಂಜಕ್ಷನ್ ಕೂಡ ಲಭಿಸಿದೆ. ಸಿನಿಮಾದ ಒರಿಜಿನಲ್ ಕಂಟೆಂಟ್ ಅನ್ನು ಯಾರೂ ಕೂಡ ಕಾನೂನುಬಾಹಿರವಾಗಿ ಹಂಚಿಕೊಳ್ಳದಂತೆ ಅಥವಾ ಪೈರಸಿ ಮಾಡದಂತೆ ಈ ಆದೇಶವು ಕಠಿಣ ರಕ್ಷಣೆ ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 6ರಂದು ನಡೆಯಲಿದೆ. ಒಟ್ಟಿನಲ್ಲಿ, ಸೃಜನಶೀಲ ಕೃತಿಯೊಂದನ್ನು ರಕ್ಷಿಸಲು ಕಾನೂನು ತನ್ನ ಬಲವಾದ ಹೆಜ್ಜೆ ಇಟ್ಟಿದ್ದು, ಪ್ರೇಕ್ಷಕರು ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.



