ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬದ ಒಡೆತನದ ಟ್ರಸ್ಟ್ಗೆ ನಿಯಮಬಾಹಿರವಾಗಿ ನಿವೇಶನ ಮಂಜೂರು ಮಾಡಲಾಗಿದೆ ಎಂಬ ಆರೋಪದ ಕಾನೂನು ಹೋರಾಟದಲ್ಲಿ ಖರ್ಗೆ ಕುಟುಂಬಕ್ಕೆ ಹಿನ್ನಡೆಯಾಗಿದೆ.
ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಬಿಡಿಎ (BDA) ಮತ್ತು ಕೆಐಎಡಿಬಿ (KIADB) ವತಿಯಿಂದ ಜಮೀನು ಮಂಜೂರು ಮಾಡಿರುವ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆಗಸ್ಟ್ 18 ರಂದು ನೀಡಿದ್ದ ಮಹತ್ವದ ಆದೇಶವನ್ನು ನ್ಯಾಯಪೀಠವು ಶುಕ್ರವಾರ ಅಧಿಕೃತವಾಗಿ ಹಿಂಪಡೆದಿದ್ದು, ಪ್ರಕರಣದ ಸಂಪೂರ್ಣ ಮರುವಿಚಾರಣೆಗೆ ಆದೇಶಿಸಿದೆ.
ಹಳೆಯ ಆದೇಶ ಹಿಂಪಡೆದ ಹೈಕೋರ್ಟ್
ಜಮೀನು ಹಂಚಿಕೆ ಆದೇಶ ರದ್ದು ಕೋರಿ ರಾಹುಲ್ ಖರ್ಗೆ ಅವರು ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ನಿರ್ಧಾರ ಪ್ರಕಟಿಸಿದೆ. ಆಗಸ್ಟ್ 18 ರಂದು ಬಿಎನ್ಎಸ್ಎಸ್ (BNSS) ಸೆಕ್ಷನ್ 223 ರ ಅಡಿಯಲ್ಲಿ ಕೆಳ ನ್ಯಾಯಾಲಯದ ವಿಚಾರಣೆಯನ್ನು ರದ್ದುಗೊಳಿಸಿದ್ದ ಆದೇಶವನ್ನು ಹೈಕೋರ್ಟ್ ಈಗ ಸಂಪೂರ್ಣವಾಗಿ ವಾಪಸ್ ಪಡೆದಿದೆ. ಇದರೊಂದಿಗೆ 82ನೇ ಸಿಸಿಎಚ್ (CCH) ಕೋರ್ಟ್ಗೆ ನೀಡಲಾಗಿದ್ದ ಹಿಂದಿನ ಎಲ್ಲಾ ನಿರ್ದೇಶನಗಳನ್ನು ರದ್ದುಗೊಳಿಸಲಾಗಿದ್ದು, ಪ್ರತಿವಾದಿಗಳ ವಾದವನ್ನು ಆಲಿಸಲು ಮುಂಬರುವ ಅ. 30 ರಂದು ಹೊಸದಾಗಿ ಮರುವಿಚಾರಣೆ ನಡೆಸಲು ಹೈಕೋರ್ಟ್ ದಿನ ನಿಗದಿಪಡಿಸಿದೆ.
ಏನಿದು ಹಗರಣ?
ಲಂಚಮುಕ್ತ ಕರ್ನಾಟಕ ವೇದಿಕೆಯ ಅಧ್ಯಕ್ಷರ ವಿಜಯ ರಾಘವ ಮರಾಠೆ ಎಂಬುವರು ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ, ಎಂ.ಬಿ. ಪಾಟೀಲ್, ರಾಧಾಕೃಷ್ಣ, ರಾಧಾಬಾಯಿ ಖರ್ಗೆ ಮತ್ತು ರಾಹುಲ್ ಖರ್ಗೆ ವಿರುದ್ಧ ಈ ಗಂಭೀರ ಖಾಸಗಿ ದೂರನ್ನು ದಾಖಲಿಸಿದ್ದರು. ಖರ್ಗೆ ಕುಟುಂಬದವರು ತಮ್ಮ ಒಡೆತನದ ‘ಸಿದ್ಧಾರ್ಥ ವಿಹಾರ ಟ್ರಸ್ಟ್’ ಅನ್ನು ಪರಿಶಿಷ್ಟ ಜಾತಿಗೆ ಸೇರಿದ ಟ್ರಸ್ಟ್ ಎಂದು ಬಿಂಬಿಸಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಶೇಕಡಾ 50 ರಷ್ಟು ರಿಯಾಯಿತಿ ದರದಲ್ಲಿ ಬಿಡಿಎ ಮತ್ತು ಕೆಐಎಡಿಬಿಯಿಂದ ಅನುಚಿತ ಲಾಭ ಪಡೆದು ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಇದನ್ನೂ ಓದಿ:
ಏರೋಸ್ಪೇಸ್ ಪಾರ್ಕ್, ಬಿಟಿಎಂ ಲೇಔಟ್ ಜಮೀನು ವಿವಾದ
ದೂರಿನ ಪ್ರಕಾರ, ದೇವನಹಳ್ಳಿಯ ಹೈಟೆಕ್ ಏರೋಸ್ಪೇಸ್ ಪಾರ್ಕ್ನಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಈ ಟ್ರಸ್ಟ್ಗೆ ಜಮೀನು ನೀಡಲಾಗಿದೆ. ಆದರೆ, ಈ ಟ್ರಸ್ಟ್ಗೆ ಏರೋಸ್ಪೇಸ್ ಸಂಶೋಧನೆಯಲ್ಲಿ ಯಾವುದೇ ರೀತಿಯ ಪೂರ್ವ ಅನುಭವ ಇಲ್ಲದಿದ್ದರೂ ಪ್ರಭಾವ ಬಳಸಿ ಭೂಮಿ ಮಂಜೂರು ಮಾಡಿಕೊಳ್ಳಲಾಗಿದೆ ಎಂಬುದು ಮುಖ್ಯ ಆರೋಪವಾಗಿದೆ.
ಇದರೊಂದಿಗೆ ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲೂ ಬರೋಬ್ಬರಿ 2 ಎಕರೆ ಭೂಮಿಯನ್ನು ಹಂಚಿಕೆ ಮಾಡಿಕೊಳ್ಳಲಾಗಿತ್ತು. ಈ ವಿವಾದ ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾದ ತಕ್ಷಣವೇ ಖರ್ಗೆ ಕುಟುಂಬದವರು ಮಂಜೂರಾಗಿದ್ದ ಜಮೀನನ್ನು ಸರ್ಕಾರಕ್ಕೆ ಮರಳಿ ಹಿಂತಿರುಗಿಸಿದ್ದರು. ಆದಾಗ್ಯೂ, ಈ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ದೂರುದಾರರು ನೇರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು.



