October 17, 2026
Saturday, October 17, 2026
spot_img

ಬೆಳ್ಳಂಬೆಳಗ್ಗೆ ಕಂಪಿಸಿದ ಭೂಮಿ: ಹಿಮಾಚಲ ಪ್ರದೇಶದಲ್ಲಿ 4.1 ತೀವ್ರತೆಯ ಭೂಕಂಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶನಿವಾರ ಮುಂಜಾನೆ ನಿದ್ರೆಯಲ್ಲಿದ್ದ ಹಿಮಾಚಲ ಪ್ರದೇಶದ ಜನರಿಗೆ ಭೂಕಂಪದ ಅನುಭವವಾಗಿದೆ. ಶಿಮ್ಲಾ ಜಿಲ್ಲೆಯಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾಮ್‌ಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲ ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ.

ಬೆಳಗಿನ ಜಾವ ಸಂಭವಿಸಿದ ಈ ಕಂಪನದಿಂದ ಸ್ಥಳೀಯರಲ್ಲಿ ಆತಂಕ ಮೂಡಿದರೂ, ಸದ್ಯದ ಮಾಹಿತಿ ಪ್ರಕಾರ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.

ಬೆಳಗಿನ ಜಾವ 4.36ಕ್ಕೆ ಭೂಮಿ ಕಂಪನ

ಅಕ್ಟೋಬರ್ 17ರ ಶನಿವಾರ ಬೆಳಗಿನ ಜಾವ ಸುಮಾರು 4.36ಕ್ಕೆ ಭೂಕಂಪ ಸಂಭವಿಸಿದೆ. ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿರುವ ರಾಮ್‌ಪುರ ಪ್ರದೇಶದಲ್ಲಿ ಕಂಪನದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿಯ ಪ್ರಕಾರ, ಭೂಕಂಪದ ಕೇಂದ್ರಬಿಂದು ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿತ್ತು.

ಭೂಕಂಪದ ಬಳಿಕ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಆದರೂ ಬೆಟ್ಟಗುಡ್ಡಗಳಿಂದ ಕೂಡಿರುವ ರಾಜ್ಯದಲ್ಲಿ ಪದೇಪದೇ ಭೂಕಂಪದ ಕಂಪನಗಳು ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರಲ್ಲಿ ಕಳವಳಕ್ಕೆ ಕಾರಣವಾಗಿದೆ.

ಮೂರು ವರ್ಷಗಳಲ್ಲಿ 67 ಬಾರಿ ಭೂಕಂಪ

ಅಧಿಕೃತ ಮಾಹಿತಿಯ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಒಟ್ಟು 67 ಭೂಕಂಪದ ಕಂಪನಗಳು ದಾಖಲಾಗಿವೆ. ಇದಕ್ಕೂ ಮೊದಲು ಆಗಸ್ಟ್ 26ರಂದು ಶಿಮ್ಲಾದಲ್ಲಿ ಸಣ್ಣ ಪ್ರಮಾಣದ ಕಂಪನಗಳು ಅನುಭವಕ್ಕೆ ಬಂದಿದ್ದವು.

Must Read