ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಧ್ವಜ ಹಿಡಿದು ಮೆರವಣಿಗೆ ನಡೆಸುವ ವಿಚಾರವಾಗಿ ದೆಹಲಿಯಲ್ಲಿ ವಿವಾದ ತೀವ್ರಗೊಂಡಿದೆ.
‘ಲೆಹ್ರಾ ದೋ ತಿರಂಗಾ’ ಪ್ರತಿಭಟನಾ ಮೆರವಣಿಗೆಗೆ ತೆರಳುತ್ತಿದ್ದ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮತ್ತು ಅಖಿಲ ಭಾರತ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನೇಹಾ ಬೋರಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ನೇಹಾ ಬೋರಾ ಅವರನ್ನು ಬಿಡುಗಡೆ ಮಾಡಲಾಗಿದ್ದು, ಅಭಿಜೀತ್ ದೀಪ್ಕೆ ವಿರುದ್ಧ ಕಾನೂನು ಕ್ರಮ ಮುಂದುವರಿದಿದೆ.
ಇದೇ ವೇಳೆ, ದೀಪ್ಕೆ ಅವರಿರುವ ಸ್ಥಳದ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಸಿಜೆಪಿ ಆರೋಪಿಸಿದ್ದು, ಪ್ರಕರಣ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಶಾಂತಿ ಭಂಗದ ಆತಂಕ: ದೀಪ್ಕೆ ವಿರುದ್ಧ ಕಾನೂನು ಕ್ರಮ
ದೆಹಲಿ ಪೊಲೀಸರ ಪ್ರಕಾರ, ಶಾಂತಿ ಭಂಗವಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅಭಿಜೀತ್ ದೀಪ್ಕೆ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 126 ಮತ್ತು 170ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ:
ಪೊಲೀಸ್ ಮೂಲಗಳ ಪ್ರಕಾರ, ಶುಕ್ರವಾರ ಸಂಜೆ ‘ಲೆಹ್ರಾ ದೋ ತಿರಂಗಾ’ ಮೆರವಣಿಗೆಯಲ್ಲಿ ಭಾಗವಹಿಸಲು ಕನ್ನಾಟ್ ಪ್ಲೇಸ್ಗೆ ತೆರಳುತ್ತಿದ್ದ ವೇಳೆ ಜಂಡೇವಾಲಾ ಪ್ರದೇಶದಲ್ಲಿ ದೀಪ್ಕೆ ಅವರನ್ನು ವಶಕ್ಕೆ ಪಡೆಯಲಾಗಿದೆ.
‘ಅಭಿಜೀತ್ ಎಲ್ಲಿದ್ದಾರೆ?’ ಸಿಜೆಪಿಯಿಂದ ಗಂಭೀರ ಆರೋಪ
ದೀಪ್ಕೆ ಅವರನ್ನು ವಶಕ್ಕೆ ಪಡೆದ ಬಳಿಕ ಹತ್ತು ಗಂಟೆಗಳಿಗೂ ಹೆಚ್ಚು ಕಾಲ ಅವರ ಕುಟುಂಬದವರು, ವಕೀಲರು ಮತ್ತು ಪಕ್ಷದ ಸದಸ್ಯರಿಗೆ ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಸಿಜೆಪಿ ಆರೋಪಿಸಿದೆ. ಅವರನ್ನು ಅಪರಿಚಿತ ಸ್ಥಳಕ್ಕೆ ಕರೆದೊಯ್ಯಲಾಗಿದ್ದು, ವಕೀಲರೊಂದಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂಬುದು ಪಕ್ಷದ ವಾದವಾಗಿದೆ.
ಸಿಜೆಪಿಯ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಪ್ರಶ್ನೆ ಎತ್ತಿದ್ದಾರೆ. ದೀಪ್ಕೆ ಅವರನ್ನು ಎಲ್ಲಿ ಇರಿಸಲಾಗಿದೆ, ಯಾವ ಕಾನೂನು ವಿಧಿಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಮತ್ತು ವಶಕ್ಕೆ ಪಡೆಯಲು ಕಾರಣವೇನು ಎಂಬ ಮಾಹಿತಿ ನೀಡುವಂತೆ ಪಕ್ಷವು ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ಪತ್ರ ಬರೆದಿದೆ. ಬಂಧನಕ್ಕೆ ಆದೇಶ ನೀಡಿದವರು ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸಿಜೆಪಿ ನಾಯಕ ರೋಹನ್ ದೇಶಪಾಂಡೆ ಒತ್ತಾಯಿಸಿದ್ದಾರೆ.
ಜನರಲ್ಲಿ ಭಯ ಮೂಡಿಸುವ ಕ್ರಮ
ಬಿಡುಗಡೆಯಾದ ಬಳಿಕ ಮಾತನಾಡಿದ ನೇಹಾ ಬೋರಾ, ಪ್ರತಿಭಟನಾಕಾರರನ್ನು ಸೂಕ್ತ ಕಾರಣವಿಲ್ಲದೆ ವಶಕ್ಕೆ ಪಡೆದು ಗಂಟೆಗಟ್ಟಲೆ ಇರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇಂತಹ ಕ್ರಮಗಳು ಸಾಮಾನ್ಯ ಜನರಲ್ಲಿ ಭಯ ಮೂಡಿಸಲು ಬಳಕೆಯಾಗುತ್ತಿವೆ ಎಂದು ಹೇಳಿದ ಅವರು, ಅಭಿಜೀತ್ ದೀಪ್ಕೆ ಸೇರಿದಂತೆ ವಶದಲ್ಲಿರುವ ಇತರ ಪ್ರತಿಭಟನಾಕಾರರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.



