October 17, 2026
Saturday, October 17, 2026
spot_img

ಕೈ ಹಿಡಿದುಕೊಂಡು ಅಸಭ್ಯವಾಗಿ ನಕ್ಕ ರ‍್ಯಾಪಿಡೋ ಡ್ರೈವರ್‌: ಕೆಟ್ಟ ಅನುಭವವನ್ನು ಹಂಚಿಕೊಂಡ ಯುವತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ನಗರ ಹೆಣ್ಣುಮಕ್ಕಳಿಗೆ ಎಷ್ಟು ಸುರಕ್ಷಿತವೋ ಅಷ್ಟೇ ಸುರಕ್ಷಿತವೂ ಅಲ್ಲ! ಇದಕ್ಕೆ ನಿದರ್ಶನದಂತೆ ಯುವತಿಯೊಬ್ಬಳು ರ‍್ಯಾಪಿಡೋ ಚಾಲಕನ ದುರ್ನಡತೆ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾಳೆ.

ಏನಾಯ್ತು?

ರ‍್ಯಾಪಿಡೋ ಹಾಗೂ ಬೆಂಗಳೂರು ಪೊಲೀಸರನ್ನು ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿರುವ ಮಹಿಳೆ, ಇಂಥ ಕೆಟ್ಟ ಚಾಲಕರು ಏನು ಮಾಡಿಯಾದ್ರೂ ತಪ್ಪಿಸಿಕೊಳ್ಳಬಹುದಾ? ಇವರಿಗೆ ಶಿಕ್ಷೆಯೇ ಇಲ್ಲವಾ? ಎಂದು ಪ್ರಶ್ನಿಸಿದ್ದಾರೆ.

ಚಾಲಕನ ಹೆಸರು ಸೈಯದ್‌ ಟೂಸಿಫ್‌ ಝೆಡ್‌. ನಿನ್ನೆ ಸಂಜೆ ನಾನು ರೈಡ್‌ ಬುಕ್‌ ಮಾಡಿದ್ದೆ. ಈತನಿಗೆ ಮಹಿಳಾ ಪ್ಯಾಸೆಂಜರ್ಸ್‌ನಿಂದ ಐದು ಸ್ಟಾರ್ಸ್‌ ಸಿಕ್ಕಿದೆ. ಹೀಗಾಗಿ ಬುಕ್‌ ಮಾಡಿಕೊಂಡೆ. ಆಮೇಲೆ ಯಾಕೋ ಇಷ್ಟವಾಗಲಿಲ್ಲ ಕ್ಯಾನ್ಸಲ್‌ ಮಾಡೋಣ ಎಂದು ಅಂದುಕೊಳ್ಳುವಷ್ಟ್ರಲ್ಲಿ ಅವರೇ ಕರೆ ಮಾಡಿ ದಯವಿಟ್ಟು ಕ್ಯಾನ್ಸಲ್‌ ಮಾಡಬೇಡಿ, ಮಳೆ ಬರುತ್ತಿದೆ, ಅರ್ಧ ದೂರ ಬಂದುಬಿಟ್ಟಿದ್ದೇನೆ ಎಂದು ಮನವಿ ಮಾಡಿದರು. ಅದಕ್ಕೆ ನಾನು ಒಪ್ಪಿಕೊಂಡೆ.

ಬೈಕ್‌ನಲ್ಲಿ ಬಂದ ಸೈಯದ್‌ ತುಂಬಾ ಫ್ರೆಂಡ್ಲಿಯಾಗಿ ನನಗೆ ರೈನ್‌ಕೋಟ್‌ ನೀಡಲು ಬಂದ. ನಾನು ಒಮ್ಮೆ ನಿರಾಕರಿಸಿದೆ. ಆತನ ಎದುರೇ ಇಯರ್‌ಫೋನ್‌ ಹಾಕಿಕೊಂಡೆ. ಅದಾದಮೇಲೆಯೂ ನಾಲ್ಕು ಬಾರಿ ರೈನ್‌ಕೋಟ್‌ ಬೇಕಾ ಎಂದು ಮಾತನಾಡಿಸಲು ಬಂದ. ನಾನು ಉತ್ತರ ನೀಡಲಿಲ್ಲ. ನಂತರ ನನ್ನ ಲೊಕೇಷನ್‌ಗೆ ಡ್ರಾಪ್‌ ಮಾಡಿದ. ಪೇ ಮಾಡಲು ಸ್ಕಾನರ್‌ ತೋರಿಸಿ ಎಂದೆ. ಸ್ಕಾನರ್‌ ಕೆಲಸ ಮಾಡುತ್ತಿಲ್ಲ ಫೋನ್‌ ನಂಬರ್‌ನಿಂದ ಪೇ ಮಾಡಿ ಎಂದ. ನಾನು ಒಪ್ಪಲಿಲ್ಲ. ಹೆಲ್ಮೆಟ್‌ ವಾಪಾಸ್‌ ಕೊಡಲು ಬಂದಾಗ ನನ್ನ ಕೈ ಹಿಡಿದುಕೊಂಡು ಕೆಟ್ಟದಾಗಿ ನಕ್ಕ. ಮೈಯೆಲ್ಲಾ ಕಂಬಳಿ ಹುಳ ಬಿಟ್ಟಂತಹ ಅಸಹ್ಯ ಅನುಭವಾಯ್ತು.

ಹಠ ಮಾಡಿ ಸ್ಕಾನರ್‌ ಪಡೆದು ದುಡ್ಡನ್ನು ಕೊಟ್ಟೆ. ನಂತರ ನಾನು ಸೊಸೈಟಿಯ ಒಳಗೆ ಹೋಗದೇ ಅಲ್ಲೇ ನಿಂತೆ. ಆತ ಒಂದು ಹೆಜ್ಜೆಯೂ ಕದಲಲಿಲ್ಲ. ಕಾಲು ಗಂಟೆಯ ನಂತರವೂ ಆತ ಅಲ್ಲಿಯೇ ನಿಂತು ನನ್ನನ್ನೇ ನೋಡುತ್ತಿದ್ದ. ಬಿಲ್ಡಿಂಗ್‌ ನಂಬರ್‌ ಗೊತ್ತಾಗಬಾರದೆಂದು ಕಟ್ಟಡದ ಹೊರಗೇ ನಿಂತಿದ್ದೆ. ಎಷ್ಟು ಸಮಯವಾದರೂ ಆತ ಹೋಗಲಿಲ್ಲ. ಸೆಕ್ಯುರಿಟಿಗೆ ಅವರನ್ನು ಕಳಿಸುವಂತೆ ಹೇಳಿದೆ. ಐದು ನಿಮಿಷ ಫೋನ್‌ ನೋಡುತ್ತಿದ್ದೇನೆ ಎಂದು ಹೇಳಿದ. ಅದಾದ ಹತ್ತು ನಿಮಿಷಕ್ಕೆ ಮತ್ತೆ ಸೆಕ್ಯುರಿಟಿ ಆತನಿಗೆ ಹೋಗಲು ಹೇಳಿದರು. ಆಗಲೂ ತಕ್ಷಣ ಹೋಗದೇ ಸತಾಯಿಸಿ ಸುಮಾರು ಹೊತ್ತಿನ ನಂತರ ಹೊರಟ ಎಂದು ಹೇಳಿಕೊಂಡಿದ್ದಾರೆ.

ಆತನಿಗೆ ಮಿಸ್‌ ಆಗಿ ನಾನು ನಂಬರ್‌ ನೀಡಿದ್ದರೆ? ಆತ ನನ್ನ ಮನೆ ನೋಡಿಕೊಂಡಿದ್ದರೆ? ನನ್ನ ಗತಿ ಏನು ಎಂದು ನೆನೆಸಿಕೊಂಡರೆ ಮೈ ನಡುಗುತ್ತದೆ. ಪೀಕ್‌ ಅವರ್‌ನಲ್ಲಿಯೇ ಆಟೋ, ಬಸ್‌, ಬೈಕ್‌, ಕ್ಯಾಬ್‌ನಲ್ಲಿ ಸೇಫ್‌ ಎನಿಸುತ್ತಿಲ್ಲ. ಪ್ಲೀಸ್‌ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.

ಈ ಟ್ವೀಟ್‌ಗೆ ಬೆಂಗಳೂರು ನಗರ ಪೊಲೀಸ್‌ ಕೂಡ ರಿಪ್ಲೇ ಮಾಡಿದ್ದು, ನಿಮ್ಮ ಏರಿಯಾ, ಘಟನೆ ನಡೆದ ಸಮಯ ಎಲ್ಲವನ್ನೂ ಕಳಿಸಿಕೊಡಿ ಎಂದು ಹೇಳಿದ್ದಾರೆ. ಅದಕ್ಕೆ ಯುವತಿ ಕಳಿಸಿದ್ದೇನೆ ದಯವಿಟ್ಟು ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.

Must Read