ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೇ ಕುಟುಂಬದ ಐವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ರಬೂಪುರದಲ್ಲಿ ನಡೆದಿದೆ.
ಮೂವರು ಮಕ್ಕಳು, ತಂದೆ ಮಹೇಶ್ ಹಾಗೂ ಪತ್ನಿ ಲಲಿತಾ ಕುಳಿತಲ್ಲೇ, ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ಇದನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಕುಟುಂಬದ ಸದಸ್ಯರು ರಾತ್ರಿ ನೂಡಲ್ಸ್ ಹಾಗೂ ಚಹಾ ಸೇವನೆ ಮಾಡಿದ್ದರು ಎಂದು ಹೇಳಲಾಗಿದೆ.
ನಿತ್ಯವೂ ಕುಟುಂಬ ಸದಸ್ಯರು ಹೊರಗೆ ಬಂದು ನೆರೆಹೊರೆಯವರನ್ನು ಮಾತನಾಡಿಸುತ್ತಿದ್ದರು, ಮಕ್ಕಳು ಆಡುವ ಸದ್ದು ಕೇಳಿಸುತ್ತಿತ್ತು. ಆದರೆ ಎಷ್ಟು ಸಮಯವಾದರೂ ಮನೆಯಿಂದ ಯಾವುದೇ ಸದ್ದು ಬಾರದ ಹಿನ್ನೆಲೆ ಜನರು ಮನೆಯೊಳಕ್ಕೆ ಹೋಗಿದ್ದಾರೆ. ಒಳಗೆ ಎಲ್ಲರೂ ಮೃತಪಟ್ಟಿರುವುದನ್ನು ಕಂಡು ಆಘಾತಕ್ಕೆ ಒಳಗಾಗಿದ್ದಾರೆ. ಮೊದಲಿಗೆ ಮಲಗಿದ್ದಾರೆಂದು ತಿಳಿದು ಎಬ್ಬಿಸಲು ಯತ್ನಿಸಿದ್ದಾರೆ. ಆದರೆ ಪ್ರತಿಕ್ರಿಯೆ ಸಿಗದ ಹಿನ್ನೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೊದಲ ನೋಟಕ್ಕೆ ಫುಡ್ ಪಾಯಿಸನ್ ಸಾವಿಗೆ ಕಾರಣ ಇರಬಹುದು ಎಂದು ಹೇಳಲಾಗಿದೆ. ಪೊಲೀಸರು ಹಾಗೂ ವಿಧಿವಿಜ್ಞಾನ ತಂಡದವರು ಅಡುಗೆಮನೆಯಲ್ಲಿದ್ದ ಚಹಾ ಪಾತ್ರೆಗಳು, ಉಳಿದ ನೂಡಲ್ಸ್ ಹಾಗೂ ಇತರ ಪದಾರ್ಥಗಳ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮರಣೋತ್ತರ ವರದಿ ನಂತರವೇ ನಿಖರ ಕಾರಣ ತಿಳಿದುಬರಲಿದೆ.



