ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ‘ಅಮೃತವರ್ಷಿಣಿ’, ‘ಸಿಂಹಾದ್ರಿಯ ಸಿಂಹ’, ‘ಕೋಟಿಗೊಬ್ಬ’ ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದ ಹಿರಿಯ ಸಂಗೀತ ನಿರ್ದೇಶಕ ದೇವಾ ನಿಧನರಾಗಿದ್ದಾರೆ. ತಮಿಳು ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಸಂಗೀತ ಶೈಲಿಯಿಂದ ಗುರುತಿಸಿಕೊಂಡಿದ್ದ ಅವರು, 75ನೇ ವಯಸ್ಸಿನಲ್ಲಿ ಚೆನ್ನೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ದೇವಾ ಅವರ ನಿಧನಕ್ಕೆ ಕಾರಣವೇನು ಎಂಬುದನ್ನು ಕುಟುಂಬ ಅಥವಾ ಸಂಬಂಧಿತ ಮೂಲಗಳು ಇನ್ನೂ ಬಹಿರಂಗಪಡಿಸಿಲ್ಲ. ಅವರ ಪಾರ್ಥಿವ ಶರೀರವನ್ನು ಚೆನ್ನೈನ ಟಿ. ನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು ಎಂದು ತಿಳಿದುಬಂದಿದೆ.
ನಾಲ್ಕು ದಶಕಗಳ ವೃತ್ತಿಜೀವನ
ಸುಮಾರು ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳ 400ಕ್ಕೂ ಹೆಚ್ಚು ಸಿನಿಮಾಗಳಿಗೆ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ಸೂಪರ್ಸ್ಟಾರ್ ರಜನಿಕಾಂತ್ ಅವರ ಚಿತ್ರಗಳ ಆರಂಭದಲ್ಲಿ ಕೇಳಿಬರುವ ಪ್ರಸಿದ್ಧ ಟೈಟಲ್ ಕಾರ್ಡ್ ಸಂಗೀತಕ್ಕೂ ದೇವಾ ಅವರೇ ಸಂಯೋಜಕರಾಗಿದ್ದರು ಎಂಬುದು ಅವರ ವೃತ್ತಿಜೀವನದ ಪ್ರಮುಖ ಗುರುತುಗಳಲ್ಲಿ ಒಂದಾಗಿದೆ.
‘ಮಟ್ಟುಕ್ಕಾರ ಮನ್ನಾರು’ ಮೂಲಕ ಸಂಗೀತ ಪಯಣ ಆರಂಭ
1986ರಲ್ಲಿ ಬಿಡುಗಡೆಯಾದ ‘ಮಟ್ಟುಕ್ಕಾರ ಮನ್ನಾರು’ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ಸಂಗೀತ ನಿರ್ದೇಶಕರಾಗಿ ಪಯಣ ಆರಂಭಿಸಿದ ದೇವಾ, ಬಳಿಕ ‘ಮನಸುಕ್ಕೇತ್ತ ಮಹಾರಾಸಾ’ ಮತ್ತು ‘ವೈಗಾಸಿ ಪೊರಂತಾಚು’ ಸೇರಿದಂತೆ ಹಲವು ಚಿತ್ರಗಳ ಮೂಲಕ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದರು.
ಚಿತ್ರರಂಗದ ಆರಂಭಿಕ ಹಂತದಲ್ಲಿ ದೂರದರ್ಶನದ ಕಾರ್ಯಕ್ರಮಗಳಿಗೂ ಸಂಗೀತ ಸಂಯೋಜಿಸಿದ್ದ ಅವರು, ಭಕ್ತಿಗೀತೆಗಳ ಕ್ಷೇತ್ರದಲ್ಲಿಯೂ ಗಮನಾರ್ಹ ಕೆಲಸ ಮಾಡಿದ್ದಾರೆ.



