October 17, 2026
Saturday, October 17, 2026
spot_img

ನವೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಅನಿರುಧ್ ರವಿಚಂದರ್-ಕಾವ್ಯ ಮಾರನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತೀಯ ಚಿತ್ರರಂಗದ ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ಅನಿರುಧ್​​​ ರವಿಚಂದರ್ ಅವರು ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ಫ್ರಾಂಚೈಸಿಯ ಮಾಲೀಕರಾದ ಕಾವ್ಯ ಮಾರನ್ ಅವರನ್ನು ವಿವಾಹವಾಗಲಿದ್ದಾರೆ.

ಕಾವ್ಯ ಅವರು ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಅವರ ಪುತ್ರಿ. ಇವರಿಬ್ಬರೂ ಈ ವರ್ಷದ ನವೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅವರ ವಿವಾಹದ ಕುರಿತಾದ ವರದಿಗಳು ಹರಿದಾಡುತ್ತಿತ್ತು. ತೆಲಂಗಾಣ ಮುಖ್ಯಮಂತ್ರಿಯವರ ಕಚೇರಿಯು ‘ಎಕ್ಸ್’ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಕಲಾನಿಧಿ ಮಾರನ್ ಮತ್ತು ಅವರ ಪತ್ನಿ ಕಾವೇರಿ ಮಾರನ್ ಅವರು, ಜುಬಿಲಿ ಹಿಲ್ಸ್‌ನಲ್ಲಿರುವ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿ, ನವೆಂಬರ್ 21ರಂದು ಚೆನ್ನೈನಲ್ಲಿ ನಡೆಯಲಿರುವ ವಿವಾಹ ಆರತಕ್ಷತೆಗೆ ಅವರನ್ನು ಆಹ್ವಾನಿಸಿದ್ದಾರೆ ಎಂದು ಈ ಪೋಸ್ಟ್ ಮಾಹಿತಿ ನೀಡಿದೆ.

ಅಧಿಕೃತ ಹೇಳಿಕೆಯಲ್ಲಿ, ಸನ್ ಗ್ರೂಪ್ ಅಧ್ಯಕ್ಷರಾದ ಕಲಾನಿಧಿ ಮಾರನ್ ಮತ್ತು ಅವರ ಪತ್ನಿ ಕಾವೇರಿ ಮಾರನ್ ಅವರು, ಜುಬಿಲಿ ಹಿಲ್ಸ್‌ನಲ್ಲಿರುವ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿ, ತಮ್ಮ ಪುತ್ರಿ ಕಾವ್ಯ ಮಾರನ್ ಅವರ ವಿವಾಹ ಆರತಕ್ಷತೆಗೆ ಅವರನ್ನು ಆಹ್ವಾನಿಸಿದರು ಎಂದು ತಿಳಿಸಲಾಗಿದೆ. ಅಲ್ಲದೇ ಪೋಸ್ಟ್​​ನಲ್ಲಿ, ಕಾವ್ಯ ಮಾರನ್ ಮತ್ತು ಅನಿರುದ್ಧ್ ರವಿಚಂದರ್ ಅವರ ವಿವಾಹ ಆರತಕ್ಷತೆಯು ನವೆಂಬರ್ 21ರಂದು ಚೆನ್ನೈನಲ್ಲಿ ನಡೆಯಲಿದೆ ಎಂದು ಸಹ ಬರೆದುಕೊಳ್ಳಲಾಗಿದೆ.

ರಿಸೆಪ್ಷನ್​ಗೆ ಸಂಬಂಧಿಸಿದ ವಿವರಗಳೀಗ ಬಹಿರಂಗಗೊಂಡಿದ್ದರೂ, ಅನಿರುಧ್ ಮತ್ತು ಕಾವ್ಯ ಅವರ ವಿವಾಹ ದಿನಾಂಕ ಹಾಗೂ ಸ್ಥಳದ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ಲಭ್ಯವಿಲ್ಲ. ನವೆಂಬರ್ 11ರಂದು ಗ್ರೀಸ್‌ನಲ್ಲಿ ಮದುವೆ ಸಮಾರಂಭ ನಡೆಯಲಿದೆ ಎಂದು ಕೆಲ ವರದಿಗಳು ತಿಳಿಸಿವೆ.

ಈ ಜೋಡಿ ಬಗೆಗಿನ ಊಹಾಪೋಹಗಳು ಮೊದಲ ಬಾರಿಗೆ 2025ರಲ್ಲಿ ಹೊರಬಂದಿದ್ದವು. ರೆಡ್ಡಿಟ್ ಪೋಸ್ಟ್ ಒಂದರಲ್ಲಿ, ಅವರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಡೇಟಿಂಗ್​​ನಲ್ಲಿದ್ದಾರೆ ಮತ್ತು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆಗ ಅನಿರುಧ್ ಅವರು ಎಕ್ಸ್​ ಪ್ಲ್ಯಾಟ್​​ಫಾರ್ಮ್​ನಲ್ಲಿ ಈ ವದಂತಿಗಳನ್ನು ತಳ್ಳಿಹಾಕುತ್ತಾ, ಮದುವೆಯಾ? ಸುಮ್ಮನಿರಿ ಸ್ನೇಹಿತರೇ. ದಯವಿಟ್ಟು ಇಂತಹ ವದಂತಿಗಳನ್ನು ಹರಡುವುದನ್ನು ನಿಲ್ಲಿಸಿ ಎಂದು ಬರೆದುಕೊಂಡಿದ್ದರು.

Must Read