ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ನೈಸ್ ರಸ್ತೆಯಲ್ಲಿ ಭಾನುವಾರ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದ್ದು, ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿ ಹೊತ್ತಿ ಉರಿದಿದೆ. ಕನಕಪುರ ರಸ್ತೆ ಟೋಲ್ನಿಂದ ಅಂಜನಾಪುರ ಕಡೆಗೆ ಚಲಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆ ಬಾನೆತ್ತರಕ್ಕೆ ಚಿಮ್ಮುತ್ತಿದೆ.
ಘಟನಾ ಸ್ಥಳಕ್ಕೆ ತಲಘಟ್ಟಪುರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಧಾವಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಬೆಂಕಿಯ ತೀವ್ರತೆ ಹೆಚ್ಚಾಗಿರುವುದರಿಂದ ಕಳೆದ ಒಂದೂವರೆ ಗಂಟೆಯಿಂದಲೂ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರಿಂದಾಗಿ ಇಡೀ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿದೆ.
ವಾಹನ ಸವಾರರ ಪರದಾಟ
ಹಬ್ಬದ ಹಿನ್ನೆಲೆಯಲ್ಲಿ ಸ್ವಂತ ಊರುಗಳಿಗೆ ಹೊರಟಿದ್ದ ಸಾರ್ವಜನಿಕರಿಗೆ ಈ ಅಪಘಾತ ದೊಡ್ಡ ಆಘಾತ ನೀಡಿದೆ. ನೈಸ್ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಕನಿಷ್ಠ ನಾಲ್ಕು ಕಿಲೋಮೀಟರ್ವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ. ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿರುವ ವಾಹನ ಸವಾರರು ತೀವ್ರ ಪರದಾಟ ನಡೆಸುತ್ತಿದ್ದಾರೆ.
ಬದಲಿ ಮಾರ್ಗ ಸೃಷ್ಟಿಸಿದ ಪೊಲೀಸರು
ಟ್ರಾಫಿಕ್ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ತಲಘಟ್ಟಪುರ ಪೊಲೀಸರು ಸಮಯಪ್ರಜ್ಞೆ ಮೆರೆದಿದ್ದಾರೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಎಂ-ಸ್ಯಾಂಡ್ (M-Sand) ಲಾರಿಯನ್ನು ತಡೆದು, ಅದರಲ್ಲಿದ್ದ ಮರಳನ್ನು ರಸ್ತೆ ಬದಿಯ ಚರಂಡಿಗೆ ಸುರಿಯಲು ಚಾಲಕನಿಗೆ ಮನವರಿಕೆ ಮಾಡಿದ್ದಾರೆ. ಚಾಲಕನಿಗೆ ತಕ್ಷಣವೇ 50,000 ರೂಪಾಯಿ ಹಣವನ್ನು ನೀಡಿ, ಮರಳನ್ನು ಚರಂಡಿಗೆ ಸುರಿಸುವ ಮೂಲಕ ತಾತ್ಕಾಲಿಕವಾಗಿ ಬದಲಿ ರಸ್ತೆಯ ವ್ಯವಸ್ಥೆ ಮಾಡಿದ್ದಾರೆ.
ಪೊಲೀಸರ ಈ ಪ್ರಯತ್ನದಿಂದಾಗಿ ಸದ್ಯ ಸಿಲುಕಿಕೊಂಡಿರುವ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದ್ದು, ಟ್ರಾಫಿಕ್ ಕ್ಲಿಯರ್ ಮಾಡಲು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ಮುಂದುವರಿದಿದೆ.



