October 18, 2026
Sunday, October 18, 2026
spot_img

ಭಾರತ ತಂಡದಲ್ಲಿ ಸಿಗದ ಜಾಗ, ರಣಜಿ ಪಂದ್ಯಕ್ಕೂ ಶಮಿ ಗೈರು: ಕಂಗೆಟ್ಟ ಬೆಂಗಾಲ್ ಬೌಲಿಂಗ್ ಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟ್ ತಂಡದ ಹಿರಿಯ ಹಾಗೂ ವೇಗದ ಬೌಲರ್ ಮೊಹಮ್ಮದ್ ಶಮಿ, ರವಿವಾರ ನವದೆಹಲಿಯ ಪಾಲಂ ಮೈದಾನದಲ್ಲಿ ಆರಂಭವಾದ ರಣಜಿ ಟ್ರೋಫಿ ಪಂದ್ಯದಿಂದ ದಿಢೀರನೆ ಹೊರಗುಳಿದಿದ್ದಾರೆ. ಸರ್ವಿಸಸ್ ವಿರುದ್ಧದ ಈ ನಿರ್ಣಾಯಕ ಪಂದ್ಯದಲ್ಲಿ ಬಂಗಾಳ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಶಮಿ ಕಣಕ್ಕಿಳಿಯಬೇಕಿತ್ತು. ಆದರೆ ಮುಂಬರುವ ನ್ಯೂಝಿಲೆಂಡ್ ಸರಣಿಗೆ ಭಾರತ ತಂಡದಿಂದ ಅವರನ್ನು ಕೈಬಿಟ್ಟ ಬೆನ್ನಲ್ಲೇ ಶಮಿ ಈ ನಿರ್ಧಾರ ತಳೆದಿರುವುದು ಕ್ರಿಕೆಟ್ ಅಂಗಳದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅಕ್ಟೋಬರ್ 16 ರಂದು ಬಿಸಿಸಿಐ ನ್ಯೂಝಿಲೆಂಡ್ ಪ್ರವಾಸಕ್ಕಾಗಿ ಭಾರತದ ಟೆಸ್ಟ್ ಮತ್ತು ಏಕದಿನ ತಂಡಗಳನ್ನು ಪ್ರಕಟಿಸಿತ್ತು. ಆದರೆ, ಈ ಪ್ರಮುಖ ಸರಣಿಗಳಿಗೆ ಶಮಿ ಅವರನ್ನು ಆಯ್ಕೆ ಮಾಡಿರಲಿಲ್ಲ. “ದೀರ್ಘ ಅವಧಿಯ ಬೌಲಿಂಗ್ ಸ್ಪೆಲ್‌ಗಳನ್ನು ಮಾಡಲು ಶಮಿ ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ” ಎಂಬ ಕಾರಣ ನೀಡಿ, ಆಯ್ಕೆ ಮಂಡಳಿಯು ಯುವ ಆಟಗಾರರಿಗೆ ಅವಕಾಶ ನೀಡಿತ್ತು. ಈ ನಿರ್ಧಾರ ಹೊರಬಿದ್ದ ಬೆನ್ನಲ್ಲೇ ಶಮಿ ರಣಜಿ ಪಂದ್ಯದಿಂದಲೂ ದೂರ ಉಳಿದಿದ್ದಾರೆ.

ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರ ಸ್ಥಾನದಲ್ಲಿ ಅವರ ಕಿರಿಯ ಸಹೋದರ ಮೊಹಮ್ಮದ್ ಕೈಫ್ ಅವರಿಗೆ ಬಂಗಾಳ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದೆ. ಇನ್ನೊಂದೆಡೆ, ಬಂಗಾಳದ ಪ್ರಮುಖ ಬೌಲರ್‌ಗಳಾದ ಆಕಾಶ್ ದೀಪ್ ಮತ್ತು ಮುಖೇಶ್ ಕುಮಾರ್ ಅವರು ‘ಇಂಡಿಯಾ ಎ’ ತಂಡವನ್ನು ಸೇರಿಕೊಂಡಿದ್ದಾರೆ. ಇದರಿಂದಾಗಿ ಇದೀಗ ಬಂಗಾಳ ತಂಡದ ಬೌಲಿಂಗ್ ಜವಾಬ್ದಾರಿ ಸಂಪೂರ್ಣವಾಗಿ ಯುವ ಪಡೆಯ ಹೆಗಲೇರಿದೆ.

Must Read