October 18, 2026
Sunday, October 18, 2026
spot_img

ಸಾಲದ ವಿಚಾರವಾಗಿ ಮನನೊಂದಿದ್ದ ಯುವ ರೈತ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆ

ಹೊಸದಿಗಂತ ವರದಿ ಬನವಾಸಿ:

ಕೃಷಿ ಸಾಲದ ವಿಚಾರವಾಗಿ ಚಿಂತಿತರಾಗಿದ್ದ 27 ವರ್ಷದ ಯುವ ರೈತನೊಬ್ಬ ಕೃಷಿ ಹೊಂಡದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಸಮೀಪದ ಬದನಗೋಡ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ರಂಗಾಪುರ-ಬದನಗೋಡ ಗ್ರಾಮದ ಚಂದನ ಕುಬೇರ ಕ್ಯಾತಣ್ಣನವರ (27) ಎಂದು ಗುರುತಿಸಲಾಗಿದೆ. ಈ ಕುರಿತು ಮೃತನ ತಂದೆ ಕುಬೇರ ಅರ್ಜುನಪ್ಪ ಕ್ಯಾತಣ್ಣನವರ ಅವರು ಬನವಾಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಪ್ರಕಾರ, ಕುಬೇರ ಅವರ ಹೆಸರಿನಲ್ಲಿ ರಂಗಾಪುರ ಗ್ರಾಮದ ಸರ್ವೆ ನಂ. 256ರಲ್ಲಿ ಒಂದು ಎಕರೆ ಕೃಷಿ ಜಮೀನಿದ್ದು, ಮೃತ ಚಂದನ ಅವರ ಹೆಸರಿನಲ್ಲಿ ಬದನಗೋಡ ಗ್ರಾಮದ ಸರ್ವೆ ನಂ. 18ರಲ್ಲಿ ಒಂದು ಎಕರೆ 13 ಗುಂಟೆ ಜಮೀನಿದೆ.

ಈ ಜಮೀನುಗಳಲ್ಲಿ ಭತ್ತ ಹಾಗೂ ಅಡಿಕೆ ಬೆಳೆಯಲಾಗುತ್ತಿತ್ತು. ಕೃಷಿಗಾಗಿ ಕಾಳಂಗಿ ಸೊಸೈಟಿಯಲ್ಲಿ ರೂ.1.50 ಲಕ್ಷ ಸಾಲ ಪಡೆಯಲಾಗಿತ್ತು. ಸಾಲ ತೀರಿಸಲು ದಾಸನಕೊಪ್ಪದ ಇಂಡಿಯನ್ ಓವರ್ಸೀಸ್ ಬ್ಯಾಂಕಿನಲ್ಲಿ ಚಿನ್ನ ಅಡವಿಟ್ಟು ಕೃಷಿ ಸಾಲ ಮರುಪಾವತಿ ಮಾಡುತ್ತಿದ್ದರು ಎನ್ನಲಾಗಿದೆ.

ಸಾಲದ ವಿಚಾರವಾಗಿ ಚಂದನ ಅವರು ಎರಡು-ಮೂರು ದಿನಗಳ ಹಿಂದೆ ತಂದೆಯೊಂದಿಗೆ ಮಾತನಾಡಿದ್ದರು. ಆಗ ತಂದೆಯವರು, ಅಷ್ಟೊಂದು ದೊಡ್ಡ ಸಾಲವೇನಲ್ಲ, ತೀರಿಸಿದರಾಯಿತು ಎಂದು ಸಮಾಧಾನಪಡಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಕ್ಟೋಬರ್ 17ರಂದು ಬದನಗೋಡ ಗ್ರಾಮದ ಜಮೀನಿನಲ್ಲಿ ಕೆಲಸ ಮುಗಿಸಿ ಸಂಜೆ 6 ಗಂಟೆ ಸುಮಾರಿಗೆ ಚಂದನ ಮನೆಗೆ ಬಂದಿದ್ದರು. ಬಳಿಕ ಅವರು ದೇವಸ್ಥಾನದ ಕಡೆಗೆ ಹೋಗಿರುವುದಾಗಿ ಕುಟುಂಬದವರಿಗೆ ತಿಳಿದುಬಂದಿತ್ತು. ರಾತ್ರಿ ಕಳೆದರೂ ಮನೆಗೆ ವಾಪಸಾಗದ ಹಿನ್ನೆಲೆಯಲ್ಲಿ ಮೊಬೈಲ್ಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು.

ಅಕ್ಟೋಬರ್ 18ರಂದು ಕುಬೇರ ಅವರು ತಮ್ಮ ಜಮೀನಿನ ಸರ್ವೆ ನಂ. 256ರಲ್ಲಿ ಹುಲ್ಲು ಕೊಯ್ಯಲು ತೆರಳಿದ್ದಾಗ, ಅಲ್ಲಿನ ಕೃಷಿ ಹೊಂಡದಲ್ಲಿ ಮಗ ಚಂದನ ಅವರ ಮೃತದೇಹ ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ. ತಕ್ಷಣವೇ ಅಕ್ಕಪಕ್ಕದ ಜಮೀನಿನಲ್ಲಿದ್ದವರಿಗೆ ವಿಷಯ ತಿಳಿಸಿದ್ದಾರೆ.

ಕೃಷಿ ಸಾಲ ತೀರಿಸಲಾಗದ ಚಿಂತೆಯಿಂದ ಮನನೊಂದು ಚಂದನ ಅವರು ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಸಾವಿನಲ್ಲಿ ಯಾವುದೇ ಸಂಶಯವಿಲ್ಲವೆಂದೂ ಉಲ್ಲೇಖಿಸಿದ್ದಾರೆ.

ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಉಪನಿರೀಕ್ಷಕ ಮಹಾಂತಪ್ಪ ಜಿ. ಕುಂಬಾರ ಅವರು ತನಿಖೆ ಕೈಗೊಂಡಿದ್ದಾರೆ.

Must Read