October 18, 2026
Sunday, October 18, 2026
spot_img

ಕೋವಾ, ಪನೀರ್, ಮಾಂಸ ಹಾಳಾಗದಂತೆ ತಡೆಯಲು ಹೊಸ ರೂಲ್ಸ್: ಆಹಾರ ಉದ್ಯಮಿಗಳಿಗೆ FSSAI ಖಡಕ್ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಾವು ನಿತ್ಯ ಬಳಸುವ ಹಾಲು, ಪನೀರ್, ಮಾಂಸದಂತಹ ಆಹಾರ ಪದಾರ್ಥಗಳು ನಿಮ್ಮ ಕೈ ಸೇರುವ ಮುನ್ನವೇ ಹಾಳಾಗುತ್ತಿವೆಯೇ? ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಈಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಒಂದು ಮಹತ್ವದ ಹೆಜ್ಜೆ ಇಟ್ಟಿದೆ.

ಕೋವಾ, ಪನೀರ್, ಮಾಂಸ ಮತ್ತು ಮೀನಿನಂತಹ ಬೇಗನೆ ಕೊಳೆಯುವ ಆಹಾರ ಪದಾರ್ಥಗಳನ್ನು ಸಂಗ್ರಹಿಸುವಾಗ ಮತ್ತು ಸಾಗಿಸುವಾಗ ಕಡ್ಡಾಯವಾಗಿ ನಿಗದಿತ ತಾಪಮಾನವನ್ನು ಕಾಯ್ದುಕೊಳ್ಳಬೇಕು ಎಂದು ಎಫ್‌ಎಸ್‌ಎಸ್‌ಎಐ ಭಾನುವಾರ ಎಲ್ಲಾ ಆಹಾರ ಉದ್ಯಮಿಗಳಿಗೆ (FBOs) ಖಡಕ್ ಸೂಚನೆ ನೀಡಿದೆ.

ಅಕ್ಟೋಬರ್ 15ರಂದ ಈ ಹೊಸ ಮಾರ್ಗಸೂಚಿಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ ಹೊರಡಿಸಲಾಗಿದೆ.

ತಾಪಮಾನ ಏರುಪೇರಾದರೆ ವಿಷವಾಗುತ್ತೆ ಆಹಾರ

ಎಫ್‌ಎಸ್‌ಎಸ್‌ಎಐ ನೀಡಿರುವ ಎಚ್ಚರಿಕೆಯ ಪ್ರಕಾರ, ಸೂಕ್ತ ತಾಪಮಾನವಿಲ್ಲದೆ ಆಹಾರವನ್ನು ಸಾಗಿಸುವುದರಿಂದ ಅದರಲ್ಲಿ ಸೂಕ್ಷ್ಮಾಣು ಜೀವಿಗಳು ವೇಗವಾಗಿ ಬೆಳೆದು ಆಹಾರವು ವಿಷಪೂರಿತವಾಗುತ್ತದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಇನ್ಮುಂದೆ ಇಂತಹ ನಿರ್ಲಕ್ಷ್ಯ ವಹಿಸಿದರೆ ಅದನ್ನು ಸ್ವಚ್ಛತೆ ಮತ್ತು ನೈರ್ಮಲ್ಯದ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.

ಆಹಾರ ಉದ್ಯಮಿಗಳು ಪಾಲಿಸಲೇಬೇಕಾದ ನಿಯಮಗಳೇನು?

ಆಹಾರವನ್ನು ಸಾಗಿಸಲು ಕೇವಲ ಮುಚ್ಚಲ್ಪಟ್ಟ, ಸ್ವಚ್ಛವಾದ ಮತ್ತು ಸುರಕ್ಷಿತವಾದ ವಾಹನಗಳನ್ನು ಮಾತ್ರ ಬಳಸಬೇಕು.

ಮಾಂಸ ಅಥವಾ ಪನೀರ್ ಮುಂತಾದವುಗಳನ್ನು ಪ್ಯಾಕ್ ಮಾಡಲು ಇನ್ಮುಂದೆ ಹಳೆಯ ಗೋಣಿಚೀಲಗಳನ್ನು ಬಳಸುವಂತಿಲ್ಲ. ಕೇವಲ ಫುಡ್-ಗ್ರೇಡ್ ಪ್ಯಾಕೇಜಿಂಗ್ ವಸ್ತುಗಳನ್ನು ಮಾತ್ರ ಬಳಸಬೇಕು.

ಸಾಗಾಟ ಮತ್ತು ಲೋಡಿಂಗ್ ಮಾಡುವಾಗ ಧೂಳು, ತೇವಾಂಶ, ಕೀಟಗಳು ಮತ್ತು ದೈಹಿಕ ಹಾನಿಯಾಗದಂತೆ ಆಹಾರವನ್ನು ರಕ್ಷಿಸುವುದು ಕಡ್ಡಾಯ.

ಪ್ರತಿಯೊಂದು ಆಹಾರದ ಲೀಟರ್ ಮತ್ತು ತೂಕದ ಇನ್‌ವಾಯ್ಸ್ (ಬಿಲ್) ಮತ್ತು ಸಾಗಾಟದ ದಾಖಲೆಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು. ಅಧಿಕಾರಿಗಳು ಕೇಳಿದ ತಕ್ಷಣ ಅದನ್ನು ಹಾಜರುಪಡಿಸಬೇಕು.

ನಿಯಮ ಮೀರಿದರೆ ಜಪ್ತಿ ಗ್ಯಾರಂಟಿ

ಈ ಹೊಸ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಭಾರತೀಯ ರೈಲ್ವೆಯ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಹದ್ದಿನ ಕಣ್ಣಿಡಲು ಸೂಚಿಸಲಾಗಿದೆ. ತಪಾಸಣೆ ವೇಳೆ ಯಾವುದೇ ಆಹಾರ ಉದ್ಯಮಿ ನಿಯಮ ಉಲ್ಲಂಘಿಸಿರುವುದು ಕಂಡುಬಂದರೆ, ಅಂತಹ ಆಹಾರ ಪದಾರ್ಥಗಳನ್ನು ತಕ್ಷಣವೇ ಜಪ್ತಿ ಮಾಡಲಾಗುವುದು ಎಂದು ಎಫ್‌ಎಸ್‌ಎಸ್‌ಎಐ ಎಚ್ಚರಿಸಿದೆ.

Must Read