October 18, 2026
Sunday, October 18, 2026
spot_img

ಪಡಿತರ ಚೀಟಿದಾರರೇ ಗಮನಿಸಿ: ಸರ್ಕಾರದಿಂದ ಮಹತ್ವದ ಆದೇಶ, ಇ-ಕೆವೈಸಿ ಅವಧಿ ಮತ್ತೆ ವಿಸ್ತರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದ ಲಕ್ಷಾಂತರ ಪಡಿತರ ಚೀಟಿ ಗ್ರಾಹಕರಿಗೆ ಆಹಾರ ಇಲಾಖೆಯು ಸಿಹಿ ಸುದ್ದಿ ನೀಡಿದೆ. ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇದ್ದ ಕೊನೆಯ ದಿನಾಂಕವನ್ನು ನವೆಂಬರ್ 10, 2026ರ ವರೆಗೆ ವಿಸ್ತರಿಸಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಮೊದಲು ಅಕ್ಟೋಬರ್ 20 ಕೊನೆಯ ದಿನವಾಗಿತ್ತು. ಆದರೆ ತಾಂತ್ರಿಕ ದೋಷ ಹಾಗೂ ಸಾರ್ವಜನಿಕರ ಪರದಾಟವನ್ನು ಗಮನಿಸಿ ಈ ಗಡುವನ್ನು ವಿಸ್ತರಿಸಲಾಗಿದೆ.

ಸರ್ವರ ಮತ್ತು ಆ್ಯಪ್ ಸಮಸ್ಯೆಗೆ ಸಿಕ್ತು ಮುಕ್ತಿ

ಪಡಿತರ ಚೀಟಿಗೆ ಇ-ಕೆವೈಸಿ ಕಡ್ಡಾಯ ಮಾಡಿದಾಗಿನಿಂದ ನ್ಯಾಯಬೆಲೆ ಅಂಗಡಿಗಳ ಮುಂದೆ ಜನರು ಗಂಟೆಗಟ್ಟಲೆ ಕ್ಯೂ ನಿಲ್ಲುವಂತಾಗಿತ್ತು. ಇದನ್ನು ತಪ್ಪಿಸಲು ಸರ್ಕಾರ ‘ಅನ್ನಸೇವೆ’ ಮೊಬೈಲ್ ಅಪ್ಲಿಕೇಶನ್ ಪರಿಚಯಿಸಿತ್ತಾದರೂ, ಅದರಲ್ಲಿ ತಾಂತ್ರಿಕ ಲೋಪದೋಷಗಳು ಕಂಡುಬಂದು ಸರ್ವರ್ ಕೈಕೊಟ್ಟಿತ್ತು. ಇದರಿಂದಾಗಿ ಸಾಮಾನ್ಯ ಜನರು ತೀವ್ರ ಪರದಾಟ ಅನುಭವಿಸುತ್ತಿದ್ದರು. ಈ ಬಗ್ಗೆ ಎಚ್ಚೆತ್ತುಕೊಂಡ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈಗ ಡೆಡ್‌ಲೈನ್ ವಿಸ್ತರಿಸಿ ಜನ ನಿರಾಳವಾಗುವಂತೆ ಮಾಡಿದೆ.

ಯಾರೆಲ್ಲಾ ಇ-ಕೆವೈಸಿ ಮಾಡಿಸಬೇಕು?

ಸರ್ಕಾರದ ಹೊಸ ನಿಯಮದ ಪ್ರಕಾರ, ಈಗಾಗಲೇ ಒಂದು ವರ್ಷಕ್ಕೂ ಮುಂಚೆ ಇ-ಕೆವೈಸಿ ಮಾಡಿಸಿರುವ 1,15,87,298 ಫಲಾನುಭವಿಗಳು ಮತ್ತೊಮ್ಮೆ ದೃಢೀಕರಣ ಮಾಡಿಸಬೇಕು.ಇದುವರೆಗೆ ಒಂದು ಬಾರಿಯೂ ಇ-ಕೆವೈಸಿ ಮಾಡಿಸದ 3,82,362 ಜನ ತಕ್ಷಣವೇ ಮಾಡಿಸಬೇಕು. ಐದು ವರ್ಷ ಮೇಲ್ಪಟ್ಟು ಇ-ಕೆವೈಸಿ ಮಾಡಿಸದ 54,27,396 ಫಲಾನುಭವಿಗಳು ತಮ್ಮ ಆಧಾರ್ ವಿವರಗಳನ್ನು ನವೀಕರಿಸಬೇಕು.

ಹೊರರಾಜ್ಯದಲ್ಲಿರುವ ಕನ್ನಡಿಗರಿಗೂ ಆಫರ್

ಕೂಲಿ ಅರಸಿ ಅಥವಾ ಕೆಲಸದ ನಿಮಿತ್ತ ಹೊರರಾಜ್ಯಗಳಿಗೆ ವಲಸೆ ಹೋಗಿರುವ ಕರ್ನಾಟಕದ ಪಡಿತರ ಚೀಟಿದಾರಿಗೆ ಇ-ಕೆವೈಸಿ ಮಾಡಿಸುವುದು ದೊಡ್ಡ ತಲೆನೋವಾಗಿತ್ತು. ಈಗ ಈ ಸಮಸ್ಯೆಯನ್ನು ನಿವಾರಿಸಲು ‘ಅನ್ನಸೇವೆ’ ಆ್ಯಪ್ ಸೇವೆಯನ್ನು ಇಡೀ ದೇಶಾದ್ಯಂತ ವಿಸ್ತರಿಸಲಾಗಿದೆ. ಹೊರರಾಜ್ಯಗಳಲ್ಲಿ ವಾಸಿಸುತ್ತಿರುವ ಕನ್ನಡಿಗರು ತಮ್ಮ ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಮೂಲಕ ಆ್ಯಪ್ ಅಪ್ಡೇಟ್ ಮಾಡಿಕೊಂಡು, ಇದ್ದಲ್ಲಿಂದಲೇ ಇ-ಕೆವೈಸಿ ಪೂರ್ಣಗೊಳಿಸಬಹುದು.

ಇದನ್ನೂ ಓದಿ:

ನವೆಂಬರ್ 10ರ ಒಳಗಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ‘AHARA’ ತಂತ್ರಾಂಶದ ಮೂಲಕ ಅಥವಾ ಅನ್ನಸೇವೆ ಆ್ಯಪ್ ಮೂಲಕ ಇ-ಕೆವೈಸಿ ಮಾಡಿಸದಿದ್ದರೆ ಮುಂದಿನ ದಿನಗಳಲ್ಲಿ ಪಡಿತರ ಸಿಗುವುದಿಲ್ಲ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

Must Read