ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆಸಿದ್ದ ಆರೋಪಿಗಳ ಮೊದಲ ಫೋಟೋ ಬಹಿರಂಗವಾಗಿದೆ.
ಫುಟ್ಬಾಲ್ ಮೈದಾನದಲ್ಲಿ ಆಟ ಮುಗಿಸಿ ಹೊರಡುತ್ತಿದ್ದ ವೇಳೆ ಗುಂಡಿದ ದಾಳಿ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ. ಬಿಳಿ ಶರ್ಟ್ ಧರಿಸಿ, ಟೋಪಿ ಧರಿಸಿರುವ ಆರೋಪಿಗಳ ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆದರೆ ಈ ಯುವಕರು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂದು ಶಂಕಿಸಲಾಗಿದೆ.
ಈ ಗ್ಯಾಂಗ್ನ ಹೆಸರಿನಲ್ಲಿರುವ ಸೋಶಿಯಲ್ ಮೀಡಿಯಾ ಅಕೌಂಟ್ನಿಂದ ಪೋಸ್ಟ್ ಒಂದನ್ನು ಮಾಡಲಾಗಿತ್ತು. ಅದರಲ್ಲಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿರುವುದಾಗಿ ಹೇಳಲಾಗಿತ್ತು. ಪೋಸ್ಟ್ ಬಗೆಗಿನ ಸತ್ಯಾಸತ್ಯತೆ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಗುಂಡಿನ ದಾಳಿ ನಡೆಸಿದ ಆರೋಪಿಗಳನ್ನ ಬಂಧಿಸಲು ಪೊಲೀಸರು ಹಲವು ತಂಡಗಳನ್ನ ರಚಿಸಿದ್ದಾರೆ. ಪ್ರಕರಣವನ್ನ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಲಾಗುತ್ತಿದೆ. ಘಟನಾ ಸ್ಥಳದಿಂದ ವಿಧಿವಿಜ್ಞಾನ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ಗ್ಯಾಂಗ್ ವಾರ್ಗಳನ್ನು ಸಹಿಸೋದಿಲ್ಲ
ಈ ಬಗ್ಗೆ ಡಿಸಿಎಂ ಶಿಂಧೆ ಮಾತನಾಡಿದ್ದು, ಗುಂಡು ಹಾಗೂ ಗಾಜಿನ ಚೂರುಗಳಿಂದ ಟೈಗರ್ ಬಲಗೈಗೆ ಗಾಯಗಳಾಗಿವೆ. ಐದು ಸುತ್ತು ಗುಂಡಿನ ದಾಳಿಯಾಗಿದೆ. ಇದರಿಂದ ಪ್ರಾಣ ಹೋಗುವ ಅಪಾಯವೂ ಇತ್ತು. ಈ ರೀತಿ ಗ್ಯಾಂಗ್ ವಾರ್ಗಳನ್ನು ಸಹಿಸುವುದಿಲ್ಲ. ಗುಂಡಿನ ದಾಳಿಯ ಹಿಂದೆ ಇರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಅವರೊಂದಿಗೆ ನಿಲ್ಲುತ್ತದೆ ಅಂತ ನಾನು ಭರವಸೆ ನೀಡಿದ್ದೇನೆ. 90ರ ದಶಕದಲ್ಲಿ ಇಂತಹ ಗ್ಯಾಂಗ್ ವಾರ್ಗಳು ಸಾಮಾನ್ಯವಾಗಿದ್ದವು, ಆದರೆ 1995ರಲ್ಲಿ ಮುಂಬೈ ಪೊಲೀಸರು ಅವುಗಳಿಗೆ ಅಂತ್ಯ ಹಾಡಿದ್ದರು. ಜನರನ್ನು ಬೆದರಿಸುವ ಇಂತಹ ಪ್ರಯತ್ನಗಳನ್ನು ಸಹಿಸುವುದಿಲ್ಲ, ಈ ಪುಂಡಾಟಿಕೆಗೆ ನಾವು ಅಂತ್ಯ ಹಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಏನಿದು ಘಟನೆ?
ಮುಂಬೈನ ಜುಹು ಪ್ರದೇಶದಲ್ಲಿರುವ ಫುಟ್ಬಾಲ್ ಮೈದಾನದಿಂದ ನಿನ್ನೆ ಸಂಜೆ ಬಾಲಿವುಡ್ ನಟ ಟೈಗರ್ ಶ್ರಾಫ್ ಹೊರಡುತ್ತಿದ್ದರು. ಈ ವೇಳೆ ಟೈಗರ್ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಡ್ರೈವರ್, ಪಕ್ಕದಲ್ಲಿದ್ದ ಆಟೋ ಚಾಲಕ ಹಾಗೂ ಟೈಗರ್ಗೆ ಗಾಯಗಳಾಗಿತ್ತು.



