October 19, 2026
Monday, October 19, 2026
spot_img

ಶಾರದೀಯ ನವರಾತ್ರಿ ದಿನ 9 | ಅಷ್ಟಸಿದ್ಧಿಗಳ ಅಧಿದೇವತೆ ‘ಮಾ ಸಿದ್ಧಿದಾತ್ರಿ’ ಆರಾಧನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾರದೀಯ ನವರಾತ್ರಿಯ ಅತ್ಯಂತ ಪವಿತ್ರ ಹಾಗೂ ಮಂಗಳಕರ ದಿನವೇ 9ನೇ ದಿನ ಅಂದರೆ ‘ಮಹಾನವಮಿ’. ಈ ಶುಭ ದಿನದಂದು ದುರ್ಗಾದೇವಿಯ ಒಂಬತ್ತನೇ ರೂಪವಾದ ‘ಮಾ ಸಿದ್ಧಿದಾತ್ರಿ’ಯನ್ನು ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ಪೂಜಿಸಲಾಗುತ್ತದೆ. ‘ಸಿದ್ಧಿ’ ಎಂದರೆ ದಿವ್ಯ ಶಕ್ತಿ ಅಥವಾ ಜ್ಞಾನ, ‘ದಾತ್ರಿ’ ಎಂದರೆ ನೀಡುವವಳು. ತನ್ನ ಭಕ್ತರಿಗೆ ಸಕಲ ಸಿದ್ಧಿಗಳು, ಸಮೃದ್ಧಿ ಮತ್ತು ಕಲ್ಯಾಣವನ್ನು ಕರುಣಿಸುವ ದೇವಿಯೇ ಈ ಮಾ ಸಿದ್ಧಿದಾತ್ರಿ.

ದೇವಿಯ ಹಿನ್ನೆಲೆ ಮತ್ತು ಇತಿಹಾಸ

ಪೌರಾಣಿಕ ಕಥೆಗಳ ಪ್ರಕಾರ, ಬ್ರಹ್ಮಾಂಡದ ಸೃಷ್ಟಿಯ ಆರಂಭದಲ್ಲಿ ಪರಮಶಿವನು ಪರಮಶಕ್ತಿಯಾದ ದೇವಿಯನ್ನು ಆರಾಧಿಸಿ ಅಷ್ಟಸಿದ್ಧಿಗಳನ್ನು (ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಕಾಮ್ಯ, ಈಶಿತ್ವ, ವಶಿತ್ವ) ಪಡೆದುಕೊಂಡನು. ಮಾ ಸಿದ್ಧಿದಾತ್ರಿಯ ಕೃಪೆಯಿಂದಾಗಿಯೇ ಶಿವನ ಅರ್ಧ ಶರೀರವು ದೇವಿಯ ಸ್ವರೂಪವಾಗಿ ಮಾರ್ಪಟ್ಟು, ‘ಅರ್ಧನಾರೀಶ್ವರ’ ಎಂಬ ಹೆಸರು ಬಂದಿತು. ದೇವಾನುದೇವತೆಗಳು, ಗಂಧರ್ವರು ಮತ್ತು ಋಷಿ-ಮುನಿಗಳು ಸಹ ಸಿದ್ಧಿಗಳನ್ನು ಪಡೆಯಲು ಈ ತಾಯಿಯನ್ನೇ ಪೂಜಿಸುತ್ತಾರೆ.

ಪೂಜಾ ವಿಧಾನ

ಬ್ರಹ್ಮಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ, ದೇವಿಗೆ ಪ್ರಿಯವಾದ ಕೆಂಪು, ಹಳದಿ ಅಥವಾ ಹಸಿರು ಬಣ್ಣದ ವಸ್ತ್ರಗಳನ್ನು ಧರಿಸಿ.

ದೇವಿಯ ವಿಗ್ರಹ ಅಥವಾ ಫೋಟೋಗೆ ಗಂಧ, ಕುಂಕುಮ, ಅಕ್ಷತೆ ಹಚ್ಚಿ. ದೇವಿಗೆ ಎಳ್ಳು, ಮಲ್ಲಿಗೆ ಅಥವಾ ಕೆಂಪು ಹೂವುಗಳನ್ನು ಅರ್ಪಿಸಿ.

ಮಾ ಸಿದ್ಧಿದಾತ್ರಿಗೆ ಪಾಯಸ, ಹಲ್ವಾ, ಕಡ್ಲೆಕಾಳು ಮತ್ತು ಪೂರಿ ಎಂದರೆ ಅತ್ಯಂತ ಪ್ರಿಯ. ಇದನ್ನು ದೇವಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ.

ನವರಾತ್ರಿಯ ಈ ದಿನದಂದು 9 ಕನ್ಯೆಯರನ್ನು ಮನೆಗೆ ಕರೆದು, ಅವರ ಪಾದ ತೊಳೆದು, ನೈವೇದ್ಯದ ಪ್ರಸಾದ ನೀಡಿ, ಉಡುಗೊರೆ ಕೊಟ್ಟು ಆಶೀರ್ವಾದ ಪಡೆಯುವುದು ಸಂಪ್ರದಾಯ.

ಇಂದು ಧರಿಸಬೇಕಾದ ಬಣ್ಣ

ಈ ದಿನ ಹಸಿರು ಬಣ್ಣದ ಉಡುಪುಗಳನ್ನು ಧರಿಸುವುದು ಶುಭ. ಹಸಿರು ಬಣ್ಣ ದಿವ್ಯ ಶಕ್ತಿ, ಆಕಾಂಕ್ಷೆ, ಜ್ಞಾನ ಮತ್ತು ಅಜ್ಞಾನದ ನಾಶವನ್ನು ಸಂಕೇತಿಸುತ್ತವೆ. ಈ ಬಣ್ಣದ ವಸ್ತ್ರ ಧರಿಸಿ ಪೂಜಿಸುವುದರಿಂದ ಮನಸ್ಸಿನಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿ, ಕಾರ್ಯಸಿದ್ದಿಯಾಗುತ್ತದೆ.

ಈ ದಿನದ ವಿಶೇಷ ಮಹತ್ವ

ಮಾ ಸಿದ್ಧಿದಾತ್ರಿಯ ಆರಾಧನೆಯು ಸಾಧಕರಿಗೆ ಹಾಗೂ ಭಕ್ತರಿಗೆ ಕೇವಲ ಸುಖ-ಸಂಪತ್ತನ್ನು ಮಾತ್ರವಲ್ಲದೆ, ಆಧ್ಯಾತ್ಮಿಕ ಜ್ಞಾನ ಮತ್ತು ಆತ್ಮಶಾಂತಿಯನ್ನು ಕರುಣಿಸುತ್ತದೆ. ಅಜ್ಞಾನ ಎಂಬ ಕತ್ತಲೆಯನ್ನು ಓಡಿಸಿ, ಜೀವನದಲ್ಲಿ ಯಶಸ್ಸು, ಆರೋಗ್ಯ ಮತ್ತು ಸಿದ್ಧಿಯನ್ನು ತಂದುಕೊಡುವ ದಿವ್ಯ ಶಕ್ತಿ ಈ ದೇವಿಯಲ್ಲಿದೆ.

ಸಾಧನೆ, ತಪಸ್ಸು ಮತ್ತು ಭಕ್ತಿಯ ಪೂರ್ಣ ಫಲವನ್ನು ನೀಡುವ ಈ ಮಹಾನವಮಿಯಂದು ತಾಯಿ ಸಿದ್ಧಿದಾತ್ರಿಯನ್ನು ಪ್ರಾರ್ಥಿಸಿ, ಸಕಲ ಶ್ರೇಯಸ್ಸನ್ನು ಪಡೆಯೋಣ.

Must Read