ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಿನಾದ್ಯಂತ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಮಾರುಕಟ್ಟೆಗಳಲ್ಲಿ ಹೂವು, ಹಣ್ಣುಗಳ ದರ ಗಗನಕ್ಕೇರಿದೆ.
ರಾಜಧಾನಿ ಬೆಂಗಳೂರಿನ ಕೆ. ಆರ್. ಮಾರುಕಟ್ಟೆಯಲ್ಲಿ ಭಾನುವಾರ ಜನಸಾಗರವೇ ಕಂಡಿದೆ. ಮುಂಬರುವ ಸಾಲು ಸಾಲು ಹಬ್ಬಗಳಿಗಾಗಿ ಜನ ಹಣ್ಣು, ತರಕಾರಿ ಹಾಗೂ ಹೂವುಗಳ ಖರೀದಿಯಲ್ಲಿ ತೊಡಗಿದ್ದಾರೆ. ಆಯುಧ ಪೂಜೆಗೆ ವಾಹನಗಳು, ಫ್ಯಾಕ್ಟರಿಗಳು ಹಾಗೂ ಕಚೇರಿಗಳಿಗೆ ಪೂಜೆ ಮಾಡಿ, ಹೂವುಗಳ ಹಾರವನ್ನು ಹಾಕಲಾಗುತ್ತದೆ. ಇದಕ್ಕಾಗಿ ಹೂವುಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ.
ಕೆಆರ್ ಮಾರುಕಟ್ಟೆಯಲ್ಲಿ ಹಬ್ಬದ ಹಿಂದಿನ ದಿನವೇ ಖರೀದಿ ಭರಾಟೆ ಜೋರಾಗಿತ್ತು. ಹಬ್ಬದ ದಿನ ಹೂವು, ಹಣ್ಣುಗಳ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆಯಿಂದ ಅನೇಕರು ಮುಂಚಿತವಾಗಿಯೇ ಖರೀದಿಗೆ ಮುಂದಾಗಿದ್ದರು. ಆದರೆ, ಹೂವುಗಳ ದರ ಹೆಚ್ಚಳದಿಂದ ವ್ಯಾಪಾರ ವಹಿವಾಟು ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಹಬ್ಬದ ಸಂಭ್ರಮದ ನಡುವೆಯೂ ಬೆಲೆ ಏರಿಕೆ ಗ್ರಾಹಕರಿಗೆ ಹೊರೆಯಾಗಿದೆ.
ಕಳೆದ ಎರಡು ದಿನಗಳಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಹೂವು ಕಟಾವು ಸಮಸ್ಯೆಯಾಗುತ್ತಿದೆ. ಇದರಿಂದಾಗಿ ಇರುವ ಹೂವುಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಸೇವಂತಿಗೆ ಮಾರಿಗೆ 150 ರೂಪಾಯಿ ಇದ್ದರೆ, ಮಲ್ಲಿಗೆ ಮಾರಿಗೆ 120 ರೂಪಾಯಿ ಇದೆ. ಕೆಜಿ ಸೇವಂತಿಗೆ ಹೂವಿಗೆ 300 ರೂಪಾಯಿ ದರ ಇದೆ. ಮಿನಿ ಮಲ್ಲಿಗೆ ಹಾರಕ್ಕೆ 600 ರೂಪಾಯಿ ಹಾಗೂ ಸಾಮಾನ್ಯ ಜೋಡಿ ತೋಮಾಲೆಗೆ ಮೂರು ಸಾವಿರ ರೂಪಾಯಿಗಳಷ್ಟು ದರ ಇದೆ.



