ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ 2026 ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡವು ಭರ್ಜರಿ ಜಯ ಬಾರಿಸಿ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಚಾಂಪಿಯನ್ಸ್ ತಂಡವನ್ನು 9 ವಿಕೆಟ್ಗಳಿಂದ ಧೂಳೀಪಟ ಮಾಡಿದ ಕೆರಿಬಿಯನ್ ಪಡೆ, ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ಚಾಂಪಿಯನ್ಸ್ ತಂಡಕ್ಕೆ ವೆಸ್ಟ್ ಇಂಡೀಸ್ ಬೌಲರ್ಗಳು ಆರಂಭದಲ್ಲೇ ನಡುಕ ಹುಟ್ಟಿಸಿದರು. ಕೆರಿಬಿಯನ್ ಪಡೆಯ ಸ್ಟಾರ್ ಆಲ್ ರೌಂಡರ್ ಡ್ವೇನ್ ಬ್ರಾವೋ ಬೌಲಿಂಗ್ ಮಾಡಿದರು. ಕೇವಲ 4 ಓವರ್ಗಳಲ್ಲಿ 21 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ಗೆ ದೊಡ್ಡ ಆಘಾತ ನೀಡಿದರು. ಬ್ರಾವೋ ಅವರ ಈ ಮಾರಕ ದಾಳಿಯಿಂದಾಗಿ ಇಂಗ್ಲೆಂಡ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ಗಳ ಸಾಧಾರಣ ಮೊತ್ತವನ್ನಷ್ಟೇ ಕಲೆಹಾಕಲು ಸಾಧ್ಯವಾಯಿತು.
160 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕ ಆಟಗಾರರು ಸಿಡಿಲಬ್ಬರದ ಆಟದ ಮೂಲಕ ಬದ್ರವಾದ ಅಡಿಪಾಯ ಹಾಕಿಕೊಟ್ಟರು. ಲೆಂಡ್ಲ್ ಸಿಮನ್ಸ್ ಮತ್ತು ಚಾಡ್ವಿಕ್ ವಾಲ್ಟನ್ ಇಂಗ್ಲೆಂಡ್ ಬೌಲರ್ಗಳನ್ನು ಮೈದಾನದ ಮೂಲೆ ಮೂಲೆಗೂ ಸಿಕ್ಸರ್-ಬೌಂಡರಿಗಳ ಮೂಲಕ ದಂಡಿಸಿದರು.
ಲೆಂಡ್ಲ್ ಸಿಮನ್ಸ್ ಕೇವಲ 53 ಎಸೆತಗಳಲ್ಲಿ ಅಜೇಯ 77 ರನ್ ಬಾರಿಸಿದರೆ, ಚಾಡ್ವಿಕ್ ವಾಲ್ಟನ್ 35 ಎಸೆತಗಳಲ್ಲಿ ಬಿರುಸಿನ 58 ರನ್ ಬಾರಿಸಿದರು. ಈ ಜೋಡಿಯ ಬ್ಯಾಟಿಂಗ್ನಿಂದಾಗಿ ವೆಸ್ಟ್ ಇಂಡೀಸ್ ತಂಡವು ಇನ್ನೂ 3 ಓವರ್ಗಳು (17 ಓವರ್ಗಳಲ್ಲಿ) ಬಾಕಿ ಇರುವಂತೆಯೇ ಕೇವಲ 1 ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ತಲುಪಿತು.
ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ಇಂಗ್ಲೆಂಡ್ ಬೆನ್ನೆಲುಬು ಮುರಿದ ಡ್ವೇನ್ ಬ್ರಾವೋ ಅವರಿಗೆ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಒಲಿಯಿತು. ಇನ್ನು ಟೂರ್ನಿಯುದ್ದಕ್ಕೂ ತಮ್ಮ ಬ್ಯಾಟಿಂಗ್ ಮೂಲಕ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿದ್ದ ಚಾಡ್ವಿಕ್ ವಾಲ್ಟನ್ ಅವರಿಗೆ ‘ಸರಣಿ ಶ್ರೇಷ್ಠ’ ಗೌರವ ದೊರೆಯಿತು.



