October 19, 2026
Monday, October 19, 2026
spot_img

ಮನೆಯ ಬಾಗಿಲಿಗೇ ಬಂದ ಹಂತಕರು : ಬೆಂಗಳೂರಿನಲ್ಲಿ ವಕೀಲನ ಬರ್ಬರ ಹ*ತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಕೀಲರೊಬ್ಬರ ಹಣೆಗೆ ಗುಂಡಿಟ್ಟು ಹತ್ಯೆಗೈದಿರುವ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪಟ್ಟಂದೂರು ಅಗ್ರಹಾರದ ನಿವಾಸಿ ಮಂಜುನಾಥ್‌ ಮೃತರು. ನಿನ್ನೆ ಮಧ್ಯರಾತ್ರಿ ಮಂಜುನಾಥ್‌ ಮನೆಗೆ ಹಂತಕರು ಆಗಮಿಸಿ ಬಾಗಿಲು ಬಡಿದಿದ್ದಾರೆ. ಮಂಜುನಾಥ್‌ ಇಷ್ಟು ಹೊತ್ತಿನಲ್ಲಿ ಯಾರು ಬಂದಿದ್ದಾರೆ ಎಂದು ಗಾಬರಿಯಿಂದಲೇ ಬಾಗಿಲು ತೆಗೆದಿದ್ದಾರೆ. ನೇರ ಅವರ ತಲೆಗೆ ಗುಂಡಿಟ್ಟು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಮಂಜುನಾಥ್ ಅವರು ವೈಟ್‌ಫೀಲ್ಡ್ ಭಾಗದಲ್ಲಿ ಹೊಂದಿದ್ದ ಜಮೀನನ್ನ ಶೆಡ್‌ಗಳಿಗೆ ಬಾಡಿಗೆಗೆ ನೀಡಿದ್ದರು. ಈ ಜಮೀನನ್ನ ಆರೋಪಿಗಳು ಬಾಡಿಗೆಗೆ ಪಡೆದಿದ್ದರು. ಕೃತ್ಯ ನಡೆಯುವುದಕ್ಕೂ ಒಂದು ಗಂಟೆ ಮುಂಚೆ ಬಾಡಿಗೆ ಹಣ ಪಾವತಿಸುವ ವಿಚಾರವಾಗಿ ಮಂಜುನಾಥ್ ಹಾಗೂ ಆರೋಪಿಗಳ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಈ ಹಣಕಾಸಿನ ವೈಮನಸ್ಸು ಹಾಗೂ ಜಮೀನು ವ್ಯಾಜ್ಯವೇ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸದ್ಯ ​ಘಟನಾ ಸ್ಥಳಕ್ಕೆ ವೈಟ್‌ಫೀಲ್ಡ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಹಂತಕರಿಗಾಗಿ ಬಲೆ ಬೀಸಿದ್ದು, ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

Must Read