ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಬಿಡುಗಡೆಯಾದ ದಿನದಿಂದಲೇ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಪ್ರೇಕ್ಷಕರ ಅತ್ಯದ್ಭುತ ಬೆಂಬಲದೊಂದಿಗೆ ಮುನ್ನುಗ್ಗುತ್ತಿರುವ ಈ ಆಕ್ಷನ್ ಎಂಟರ್‌ಟೇನರ್ ಚಿತ್ರವು ಬಿಡುಗಡೆಯಾದ ಕೇವಲ 4 ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 424 ಕೋಟಿ ರೂಪಾಯಿಗಳಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ವಾರಾಂತ್ಯದಲ್ಲಿ ಪ್ರೇಕ್ಷಕರ ಬೆಂಬಲ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಭಾರತದಲ್ಲೇ ಭಾನುವಾರ ಒಂದೇ ದಿನ ಬರೋಬ್ಬರಿ 55.85 ಕೋಟಿ ರೂಪಾಯಿ ನೆಟ್ ಗಳಿಕೆ ಕಂಡಿದೆ. ಇದರೊಂದಿಗೆ ದೇಶಾದ್ಯಂತ ಸಿನಿಮಾದ ಒಟ್ಟು ನೆಟ್ ಕಲೆಕ್ಷನ್ 199.90 ಕೋಟಿ ರೂಪಾಯಿಗೆ ತಲುಪಿದ್ದು, ಶೀಘ್ರದಲ್ಲೇ 200 ಕೋಟಿಯ ಗಡಿ ದಾಟಲಿದೆ.
ಚಿತ್ರಕ್ಕೆ ಭಾರತದಲ್ಲಿ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಯಲ್ಲೂ ಅಭೂತಪೂರ್ವ ಪ್ರಶಂಸೆ ವ್ಯಕ್ತವಾಗಿದೆ. ಕೇವಲ ವಿದೇಶಗಳಿಂದಲೇ ಈ ಸಿನಿಮಾ 190 ಕೋಟಿ ರೂಪಾಯಿ ಗಳಿಸಿದೆ. ಒಟ್ಟಾರೆಯಾಗಿ ಜಾಗತಿಕ ಮಟ್ಟದಲ್ಲಿ 424.25 ಕೋಟಿ ರೂ. ಕಲೆಹಾಕಿದ್ದು, ಸದ್ಯದಲ್ಲೇ ಬೃಹತ್ 500 ಕೋಟಿ ರೂಪಾಯಿ ಕ್ಲಬ್ ಸೇರುವುದು ಖಚಿತವಾಗಿದೆ.
ತಮಿಳು ಆವೃತ್ತಿಯ ಜೊತೆಗೆ ತೆಲುಗು, ಹಿಂದಿ ಹಾಗೂ ಕನ್ನಡ ಆವೃತ್ತಿಗಳು ಸಹ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ. ರಜನಿಕಾಂತ್ ಹವಾ ಹಾಗೂ ನೆಲ್ಸನ್ ಅವರ ಸಸ್ಪೆನ್ಸ್-ಆಕ್ಷನ್ ಶೈಲಿಗೆ ಚಿತ್ರಪ್ರೇಮಿಗಳು ಫಿದಾ ಆಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ‘ಜೈಲರ್ 2’ ಜಯಭೇರಿ ಸಾಧಿಸಿದೆ.



