October 19, 2026
Monday, October 19, 2026
spot_img

ನವರಾತ್ರ ನಮಸ್ಯಾ | ಕೋಲಿನಿಂದಲ್ಲ, ಬುದ್ಧಿಯ ಬದಲಾವಣೆಯಿಂದಲೇ ದಂಡನೆ; ದೇವರ ಅನುಗ್ರಹದ ರಹಸ್ಯ ಬಿಚ್ಚಿಟ್ಟ ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇವತೆಗಳು ಜೀವಿಗಳನ್ನು ಕೋಲಿನಿಂದ ದಂಡಿಸುವುದಿಲ್ಲ; ಬದಲಾಗಿ ಒಳ್ಳೆಯ ಬುದ್ಧಿಯನ್ನು ಅನುಗ್ರಹಿಸುವ ಮೂಲಕ ಉದ್ಧಾರ ಮಾಡುತ್ತಾರೆ. ಶಿಕ್ಷೆ ನೀಡಬೇಕಾದಾಗ ಬುದ್ಧಿಯನ್ನು ಕೆಡಿಸುವ ಮೂಲಕ ಜೀವಿ ತೊಂದರೆಗೆ ಒಳಗಾಗುವಂತೆ ಮಾಡುತ್ತಾರೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಶ್ರೀಗಳು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದಲ್ಲಿ ಸೋಮವಾರ ಲಲಿತೋಪಾಖ್ಯಾನದ ಕುರಿತು ಪ್ರವಚನ ಅನುಗ್ರಹಿಸಿದರು.

ನಮ್ಮ ಏಳಿಗೆ ಮತ್ತು ಪತನದ ಲಕ್ಷಣಗಳು ನಮ್ಮ ಬುದ್ಧಿಯಲ್ಲೇ ಇವೆ. ನಮ್ಮ ಆಲೋಚನೆಗಳು ಯಾವ ದಿಕ್ಕಿನಲ್ಲಿ ಸಾಗುತ್ತಿವೆ ಹಾಗೂ ನಮ್ಮ ಆಚರಣೆಗಳು ಹೇಗಿವೆ ಎಂಬುದನ್ನು ಅವಲೋಕಿಸಿದರೆ ಭವಿಷ್ಯದ ದಿಕ್ಕನ್ನು ಅರಿಯಬಹುದು. ನಾವು ಸರಿದಾರಿಯಲ್ಲಿ ಸಾಗುತ್ತಿದ್ದರೆ ದೇವರ ಅನುಗ್ರಹವಿದೆ, ತಪ್ಪು ದಾರಿಯಲ್ಲಿ ನಡೆಯುತ್ತಿದ್ದರೆ ಅವಕೃಪೆಗೆ ಒಳಗಾಗಿದ್ದೇವೆ ಎಂದು ಅರ್ಥೈಸಬಹುದು ಎಂದರು.

ಶಿವನ ಭಕ್ತನಾಗಿ ನಿತ್ಯ ಆರಾಧನೆಯಲ್ಲಿ ತೊಡಗಿದ್ದ ಭಂಡಾಸುರನು ವಿಷ್ಣುವಿನ ಮಾಯೆಯಿಂದ ಮೋಹಿನಿಯ ಮೋಹಕ್ಕೆ ಒಳಗಾಗಿ ತನ್ನ ಆರಾಧನೆಯಿಂದ ವಿಮುಖನಾದ. ಅಲ್ಲಿಂದಲೇ ಅವನ ಅವನತಿ ಆರಂಭವಾಯಿತು ಎಂದು ಭಂಡಾಸುರನ ಕಥೆಯನ್ನು ವಿವರಿಸಿದರು.

ಸೃಷ್ಟಿಯ ಸಹಜ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಬೇಡ

ಸೃಷ್ಟಿಯ ಸಹಜ ಪ್ರಕ್ರಿಯೆಯನ್ನು ನಾವು ವ್ಯತ್ಯಾಸಗೊಳಿಸಲು ಹೋಗಬಾರದು. ಸೃಷ್ಟಿ ಶಂಕರವಾದರೆ, ಅದರಲ್ಲಿ ನಮ್ಮ ಹಸ್ತಕ್ಷೇಪ ಸಂಕರವಾಗುತ್ತದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು. ನೈಸರ್ಗಿಕ ಪ್ರಕ್ರಿಯೆ ಸುಂದರವಾಗಿದ್ದು, ಅದರಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಬಾರದು ಎಂದರು.

ತಾರಕಾಸುರನ ಸಂಹಾರಕ್ಕಾಗಿ ಶಿವನ ಮಗನ ಜನನವಾಗಬೇಕಿತ್ತು. ಶಿವನನ್ನು ಒಲಿಸಿಕೊಳ್ಳಲು ತಪಸ್ಸಿನ ಮಾರ್ಗ ಹಿಡಿಯುವ ಬದಲು ಮನ್ಮಥನ ಬಾಣ ಪ್ರಯೋಗಿಸುವಂತೆ ದೇವತೆಗಳು ಮಾಡಿದರು. ಹೂವನ್ನೇ ಪೂಜೆಗೆ ಬಳಸಿದ್ದರೆ ಶಿವ ಸಂಪ್ರೀತನಾಗುತ್ತಿದ್ದ. ಆದರೆ ಬಾಣ ಪ್ರಯೋಗದಿಂದ ತಾರಕಾಸುರನ ಪೀಡೆಯ ಜೊತೆಗೆ ಭಂಡಾಸುರನ ಕಾಟವನ್ನೂ ಅನುಭವಿಸುವಂತಾಯಿತು ಎಂದು ವಿವರಿಸಿದರು.

ಲಲಿತೋಪಾಖ್ಯಾನ ಪ್ರವಚನದ ಉದ್ದೇಶ ರಾಜರಾಜೇಶ್ವರಿಯ ದಿವ್ಯರೂಪವನ್ನು ಮನಸ್ಸಿನಲ್ಲಿ ಮೂಡಿಸಿಕೊಂಡು ಧ್ಯಾನಿಸುವುದಾಗಿದೆ. ಹಯಗ್ರೀವನು ಅಗಸ್ತ್ಯ ಮಹರ್ಷಿಗಳಿಗೆ ಉಪದೇಶಿಸಿದ ಲಲಿತೋಪಾಖ್ಯಾನದ ತತ್ತ್ವಗಳನ್ನು ಜನರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಬಸವನಗುಡಿ ಶಾಸಕ ಎಲ್. ಎ. ರವಿ ಸುಬ್ರಮಣ್ಯ, ಖ್ಯಾತ ಶಿಲ್ಪಿ ಜಿ.ಎಲ್. ಭಟ್, ಉದ್ಯಮಿ ಅರವಿಂದ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದರು. ಸರಸ್ವತೀ ಸೂಕ್ತ ಹವನ, ದುರ್ಗಾದೀಪ ನಮಸ್ಕಾರ, ಕುಂಕುಮಾರ್ಚನೆ, ರಾಜರಾಜೇಶ್ವರೀ ಪೂಜೆ ನಡೆಯಿತು. ಸುಬ್ರಾಯ ಹೆಗಡೆ ಹೊಸಕೋಟೆ, ಸಂದೀಪ್ ಮೂರ್ತಿ, ಪ್ರಕಾಶ್ ಮಳಲಗದ್ದೆ, ದಿನಪ್ರಧಾನರಾಗಿ ಸುಬ್ರಹ್ಮಣ್ಯ ಕೆರೆಮೂಲೆ ದಂಪತಿ ಉಪಸ್ಥಿತರಿದ್ದರು.

ಇಂದು (20.10.2026) ರಂದು ಸಂಜೆ ರಾಜರಾಜೇಶ್ವರೀ ಮೂರ್ತಿಯ ವಿಸರ್ಜನೆ ನಡೆಯಲಿದ್ದು, ಭವ್ಯ ಮೆರವಣಿಗೆ ನಡೆಯಲಿದೆ. ಬೆಳಗ್ಗೆ ಶತಚಂಡಿಕಾ ಮಹಾಯಾಗ ನಡೆಯಲಿದ್ದು, ವಿಜಯದಶಮಿಯ ಅಂಗವಾಗಿ ಬನ್ನಿ ಪೂಜೆ ನಡೆಯಲಿದೆ.

Must Read