ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಗಳೆಂದು ಗುರುತಿಸಲಾದ ಮೂವರನ್ನು ರಾಜಸ್ಥಾನದ ಕೋಟಾ ನಗರ ಪೊಲೀಸರು ರೈಲಿನಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ದೆಹಲಿ ಮೂಲಕ ನೇಪಾಳಕ್ಕೆ ಪರಾರಿಯಾಗಲು ಯೋಜಿಸಿದ್ದರು ಎಂಬುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ಕೋಟಾ ಪೊಲೀಸ್ ವರಿಷ್ಠಾಧಿಕಾರಿ ತೇಜಸ್ವಿನಿ ಗೌತಮ್ ತಿಳಿಸಿದ್ದಾರೆ.
ಬಂಧಿತರನ್ನು ಹರಿಯಾಣದ ರೆಹಾನ್ ಅಲಿಯಾಸ್ ಸುಕ್ಕಾ, ಬಿಹಾರದ ಹೃತಿಕ್ ಕುರ್ಮಿ ಅಲಿಯಾಸ್ ರೋಷನ್ ಹಾಗೂ ಒಬ್ಬ ಅಪ್ರಾಪ್ತ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:
ಆರೋಪಿಗಳು ಪುಣೆ–ಜೈಪುರ ಎಕ್ಸ್‌ಪ್ರೆಸ್ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಅವರು ಕೋಟಾ ನಿಲ್ದಾಣಕ್ಕೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದ ಬಳಿಕ ಪೊಲೀಸರು ಕಾರ್ಯಾಚರಣೆ ರೂಪಿಸಿ, ಕೇವಲ 15 ನಿಮಿಷಗಳಲ್ಲಿ ರೈಲನ್ನು ಪರಿಶೀಲಿಸಿ ಮೂವರನ್ನೂ ವಶಕ್ಕೆ ಪಡೆದಿದ್ದಾರೆ.
ಗ್ಯಾಂಗ್‌ಸ್ಟರ್ ಸಂಪರ್ಕದ ಬಗ್ಗೆ ತನಿಖೆ
ಪ್ರಾಥಮಿಕ ವಿಚಾರಣೆಯ ವೇಳೆ ರೆಹಾನ್ ಎಂಬ ಆರೋಪಿಯೊಂದಿಗೆ ಅನಿಲ್ ಪಂಡಿತ್ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಲಭಿಸಿದೆ ಎಂದು ತೇಜಸ್ವಿನಿ ಗೌತಮ್ ಹೇಳಿದ್ದಾರೆ. ಅನಿಲ್ ಪಂಡಿತ್‌ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಪರ್ಕವಿದೆ ಎನ್ನಲಾಗಿದ್ದು, ಈ ಸಂಬಂಧದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆದರೆ ಗುಂಡಿನ ದಾಳಿಯಲ್ಲಿ ಬಳಸಲಾಗಿದೆ ಎನ್ನಲಾದ ಶಸ್ತ್ರಾಸ್ತ್ರಗಳು ಇನ್ನೂ ಪತ್ತೆಯಾಗಿಲ್ಲ. ಅವುಗಳನ್ನು ಎಲ್ಲಿಗೆ ಕೊಂಡೊಯ್ಯಲಾಗಿದೆ ಎಂಬುದರ ಬಗ್ಗೆ ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ಗಳು 109(1), 3(5) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್‌ಗಳು 3 ಮತ್ತು 25ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪರಾರಿಯ ಯತ್ನದಲ್ಲಿದ್ದ ಆರೋಪಿಗಳ ಬಂಧನದಿಂದ ತನಿಖೆಗೆ ಮಹತ್ವದ ಸುಳಿವು ಸಿಕ್ಕಿದೆ. ಇದೀಗ ಆರೋಪಿಗಳನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ದಾಳಿಯ ಹಿಂದಿನ ಉದ್ದೇಶ, ಶಸ್ತ್ರಾಸ್ತ್ರಗಳ ಮೂಲ ಮತ್ತು ಇತರರ ಪಾತ್ರದ ಬಗ್ಗೆ ಮುಂದಿನ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.



