October 20, 2026
Tuesday, October 20, 2026
spot_img

56.36 ಸೆಕೆಂಡ್‌ಗಳಲ್ಲಿ ಚಿನ್ನದ ಬೇಟೆ: ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ದಾಖಲೆ ಬರೆದ ದೀಪ್ತಿ ಜೀವಂಜಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಪ್ಯಾರಾ ಅಥ್ಲೀಟ್ ದೀಪ್ತಿ ಜೀವಂಜಿ ಅಮೋಘ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದಿದ್ದಾರೆ. ಮಂಗಳವಾರ ನಡೆದ ಮಹಿಳೆಯರ 400 ಮೀಟರ್ ಟಿ20 ಓಟವನ್ನು ಕೇವಲ 56.36 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದ ಅವರು, ಹೊಸ ಗೇಮ್ಸ್ ದಾಖಲೆಯನ್ನೂ ನಿರ್ಮಿಸಿದ್ದಾರೆ.

ಈ ಮೂಲಕ ಭಾರತಕ್ಕೆ ಐದನೇ ಚಿನ್ನದ ಪದಕ ತಂದುಕೊಟ್ಟಿದ್ದಲ್ಲದೆ, ಎರಡನೇ ದಿನದ ಸ್ಪರ್ಧೆಯಲ್ಲಿ ದೇಶದ ಮೊದಲ ಚಿನ್ನದ ಸಾಧಕಿಯಾಗಿದ್ದಾರೆ.

2024 ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ

ಪ್ಯಾರಿಸ್ 2024 ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ದೀಪ್ತಿ, ಈ ಬಾರಿಯೂ ತಮ್ಮ ವೇಗ ಮತ್ತು ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಸ್ಪರ್ಧೆಯ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡ ಅವರು, ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ ಎರಡು ಸೆಕೆಂಡ್‌ಗಳಿಗೂ ಹೆಚ್ಚು ಅಂತರದಲ್ಲಿ ಗುರಿ ತಲುಪಿದರು. ಜಪಾನ್‌ನ ನಿನಾ ಕನ್ನೊ 58.92 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಬೆಳ್ಳಿ ಪದಕ ಪಡೆದರೆ, ಅದೇ ದೇಶದ ಅಕಾನೆ ಕಾಟೊ 1 ನಿಮಿಷ 00.26 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು.

ಇದನ್ನೂ ಓದಿ:

ಪ್ಯಾರಾ ಟೇಬಲ್ ಟೆನಿಸ್ ನಲ್ಲೂ ಕಂಚಿನ ಪದಕ

ಇದೇ ವೇಳೆ, ಭಾರತದ ಪ್ಯಾರಾ ಟೇಬಲ್ ಟೆನಿಸ್ ತಾರೆ ಭವಿನಾ ಪಟೇಲ್ ಮಹಿಳೆಯರ ಸಿಂಗಲ್ಸ್ ಕ್ಲಾಸ್ 4–5 ವಿಭಾಗದ ಸೆಮಿಫೈನಲ್‌ನಲ್ಲಿ ಚೀನಾದ ಝಾಂಗ್ ಬಿಯಾನ್ ವಿರುದ್ಧ 7–11, 5–11, 7–11 ಅಂಕಗಳಿಂದ ಸೋಲು ಕಂಡರು. ಇದರೊಂದಿಗೆ ಅವರಿಗೆ ಕಂಚಿನ ಪದಕ ಲಭಿಸಿತು. 2020ರ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಭವಿನಾ, ಮತ್ತೊಮ್ಮೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪದಕ ಸಾಧನೆ ಮಾಡಿದ್ದಾರೆ.

ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಪ್ರಮೋದ್ ಭಗತ್ ಮತ್ತು ಮಾನಿಷಾ ರಾಮದಾಸ್ ಜೋಡಿ ಮಿಶ್ರ ಡಬಲ್ಸ್ ಎಸ್‌ಎಲ್3–ಎಸ್‌ಯು5 ವಿಭಾಗದ ಸೆಮಿಫೈನಲ್‌ಗೆ ಪ್ರವೇಶಿಸಿ ಪದಕದ ಭರವಸೆ ಮೂಡಿಸಿದೆ.

ಕ್ವಾರ್ಟರ್‌ಫೈನಲ್‌ನಲ್ಲಿ ಥಾಯ್ಲೆಂಡ್ ಜೋಡಿಯನ್ನು 21–15, 21–14 ಅಂಕಗಳಿಂದ ಮಣಿಸಿದರು. ಇತ್ತ ಪ್ಯಾರಾ ಆರ್ಚರಿಯಲ್ಲೂ ಹರ್ವಿಂದರ್ ಸಿಂಗ್, ಭಾವನಾ, ಶೀತಲ್ ದೇವಿ, ಪಾಯಲ್ ನಾಗ್, ತೋಮನ್ ಕುಮಾರ್ ಮತ್ತು ಶ್ಯಾಮ್ ಸುಂದರ್ ಸ್ವಾಮಿ ತಮ್ಮ ವೈಯಕ್ತಿಕ ವಿಭಾಗಗಳಲ್ಲಿ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆದಿದ್ದಾರೆ.

Must Read