October 20, 2026
Tuesday, October 20, 2026
spot_img

ಭಾರತ ಇಂಧನ ಸಂಸ್ಕರಣೆಯ ಸೂಪರ್ ಪವರ್: ರಿಲಯನ್ಸ್ ಸಂಸ್ಥೆಯನ್ನು ಶ್ಲಾಘಿಸಿದ  ಮಾರ್ಕೊ ರುಬಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರತದ ಪ್ರಾಮುಖ್ಯತೆ ಹೆಚ್ಚುತ್ತಿರುವುದರ ನಡುವೆ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದೆ. ಭಾರತ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಅವರು, ವೆನೆಜುವೆಲಾದ ಕಚ್ಚಾ ತೈಲ ಸಂಸ್ಕರಣೆಗೆ ಸಂಬಂಧಿಸಿದಂತೆ ರಿಲಯನ್ಸ್ ಇಂಡಸ್ಟ್ರೀಸ್ ಎದುರಿಸುತ್ತಿರುವ ಸವಾಲುಗಳು ಮತ್ತು ಲಭ್ಯವಿರುವ ಅವಕಾಶಗಳ ಕುರಿತು ಅಮೆರಿಕ ಸರ್ಕಾರ ಚರ್ಚಿಸಲಿದೆ ಎಂದು ಮಂಗಳವಾರ ಮುಂಬೈನಲ್ಲಿ ಪ್ರಕಟಿಸಿದ್ದಾರೆ.

ಇದಕ್ಕಾಗಿ ಅವರು ಬುಧವಾರ ಗುಜರಾತ್‌ನಲ್ಲಿರುವ ರಿಲಯನ್ಸ್ ಸಂಸ್ಥೆಯ ಜಾಂನಗರ ತೈಲ ಸಂಸ್ಕರಣಾಗಾರಕ್ಕೆ (ರಿಫೈನರಿ) ಖುದ್ದಾಗಿ ಭೇಟಿ ನೀಡಲಿದ್ದಾರೆ.

ಭಾರತ ಇಂಧನ ಸಂಸ್ಕರಣೆಯ ಜಾಗತಿಕ ಸೂಪರ್ ಪವರ್

ಮುಂಬೈಗೆ ಬಂದಿಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾರ್ಕೊ ರುಬಿಯೋ, ಭಾರತದ ತೈಲ ಸಂಸ್ಕರಣಾ ಸಾಮರ್ಥ್ಯವನ್ನು ಮುಕ್ತವಾಗಿ ಶ್ಲಾಘಿಸಿದರು. “ಭಾರತವು ಇಂಧನ ಸಂಸ್ಕರಣಾ ವಲಯದ ಜಾಗತಿಕ ಸೂಪರ್ ಪವರ್ ಆಗಿದೆ. ವೆನೆಜುವೆಲಾದ ಭಾರೀ ಕಚ್ಚಾ ತೈಲವನ್ನು ಪರಿಣಾಮಕಾರಿಯಾಗಿ ಸಂಸ್ಕರಿಸುವ ತಾಂತ್ರಿಕ ಸಾಮರ್ಥ್ಯ ಮತ್ತು ನೈಪುಣ್ಯತೆ ಭಾರತದ ಕಂಪನಿಗಳಿಗಿದೆ” ಎಂದು ಅವರು ತಿಳಿಸಿದರು. ಈ ಹಿಂದೆ ವೆನೆಜುವೆಲಾದಲ್ಲಿ ರಿಲಯನ್ಸ್ ಸಂಸ್ಥೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದನ್ನು ಅವರು ಈ ವೇಳೆ ಸ್ಮರಿಸಿದರು.

ಅಡ್ಡಿಯಾಗುತ್ತಿರುವ ಅಮೆರಿಕದ ನಿರ್ಬಂಧಗಳು

ವೆನೆಜುವೆಲಾದಲ್ಲಿ ರಿಲಯನ್ಸ್ ಸಂಸ್ಥೆಯು ತೈಲ ಉತ್ಪಾದನೆಯನ್ನು ಹೆಚ್ಚಿಸಲು ಅಮೆರಿಕ ಉತ್ತೇಜನ ನೀಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರುಬಿಯೋ, “ನಾವು ಈ ಹಿಂದೆ ಕೂಡ ಈ ಕುರಿತು ರಿಲಯನ್ಸ್ ಜೊತೆ ಮಾತನಾಡಿದ್ದೇವೆ. ಪ್ರಸ್ತುತ ಅಲ್ಲಿ ತೈಲ ಉತ್ಪಾದನೆ ಹೆಚ್ಚಿಸಲು ಯಾವೆಲ್ಲಾ ಅಡಚಣೆಗಳಿವೆ ಹಾಗೂ ಮುಂಬರುವ ದಿನಗಳಲ್ಲಿ ಯಾವ ರೀತಿಯ ಹೊಸ ಅವಕಾಶಗಳನ್ನು ಬಳಸಿಕೊಳ್ಳಬಹುದು ಎಂಬುದನ್ನು ನಾವು ಪರಿಶೀಲಿಸಲಿದ್ದೇವೆ” ಎಂದರು. ಆದರೆ, ವೆನೆಜುವೆಲಾ ಮೇಲಿನ ಅಮೆರಿಕದ ಆರ್ಥಿಕ ನಿರ್ಬಂಧಗಳು ಈ ಜಂಟಿ ಸಹಕಾರಕ್ಕೆ ಕೆಲವು ಕಾನೂನಾತ್ಮಕ ಅಡೆತಡೆಗಳನ್ನು ಒಡ್ಡಬಹುದು, ಅವುಗಳನ್ನು ಪರಸ್ಪರ ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬೇಕಿದೆ ಎಂದು ಅವರು ಒಪ್ಪಿಕೊಂಡರು.

ಜಾಗತಿಕ ತೈಲ ಬಿಕ್ಕಟ್ಟಿಗೆ ಭಾರತದ ನೆರವು

ಪ್ರಸ್ತುತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ವಿವಿಧ ಯುದ್ಧಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದಾಗಿ ಅಂತಾರಾಷ್ಟ್ರೀಯ ಇಂಧನ ಪೂರೈಕೆ ಜಾಲ ಹಾಗೂ ಸಾರಿಗೆ ಮಾರ್ಗಗಳು ತೀವ್ರವಾಗಿ ಬಾಧಿತವಾಗಿವೆ. ಇದರಿಂದಾಗಿ ಜಗತ್ತಿನಾದ್ಯಂತ ಕೈಗೆಟುಕುವ ದರದಲ್ಲಿ ಇಂಧನ ಲಭ್ಯತೆ ಕಷ್ಟವಾಗುತ್ತಿದೆ. ಈ ಇಂಧನ ಒತ್ತಡವನ್ನು ಕೊಂಚ ಮಟ್ಟಿಗೆ ತಗ್ಗಿಸಲು ವೆನೆಜುವೆಲಾದ ತೈಲ ಉತ್ಪಾದನೆ ಹೆಚ್ಚಳ ಸಹಕಾರಿಯಾಗಲಿದ್ದು, ಭಾರತದ ರಿಫೈನರಿಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸಬಲ್ಲವು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಶಯ ವ್ಯಕ್ತಪಡಿಸಿದರು.

Must Read