October 20, 2026
Tuesday, October 20, 2026
spot_img

‘ಉಗ್ರರಿಗೆ ಆಶ್ರಯ ನೀಡುವವರಿಗೆ ಜಗತ್ತಿನಲ್ಲಿ ಜಾಗವಿಲ್ಲ’: SCO ವೇದಿಕೆಯಲ್ಲಿ ಗುಡುಗಿದ ರಾಜನಾಥ್ ಸಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಜಾಗತಿಕ ವೇದಿಕೆಯಲ್ಲೇ ಭಯೋತ್ಪಾದನೆ ವಿರುದ್ಧ ವಾಗ್ದಾಳಿ ನಡೆಸಿರುವ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉಗ್ರರಿಗೆ ಆಶ್ರಯ ನೀಡುವ ಮತ್ತು ಧನಸಹಾಯ ಮಾಡುವ ದೇಶಗಳಿಗೆ ಜಗತ್ತಿನಲ್ಲಿ ಎಲ್ಲೂ ಸ್ಥಾನ ಇರಬಾರದು ಎಂದು ಗುಡುಗಿದ್ದಾರೆ.

ತಜಕಿಸ್ತಾನ್‌ನ ದುಶಾನ್ಬೆಯಲ್ಲಿ ನಡೆದ SCO ಸರ್ಕಾರಿ ಮುಖ್ಯಸ್ಥರ 25ನೇ ಮಂಡಳಿ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಮಾತನಾಡಿದ ಅವರು, ಭಯೋತ್ಪಾದನೆಯನ್ನು ಮಟ್ಟಹಾಕುವ ವಿಚಾರದಲ್ಲಿ ಜಗತ್ತಿನ ಯಾವುದೇ ರಾಷ್ಟ್ರಗಳು ದ್ವಂದ್ವ ನಿಲುವನ್ನು ಹೊಂದಿರಬಾರದು ಎಂದು ಪಾಕಿಸ್ತಾನ ಸೇರಿದಂತೆ ಉಗ್ರ ಪೋಷಕ ದೇಶಗಳಿಗೆ ಜಾಗತಿಕ ವೇದಿಕೆಯಲ್ಲೇ ಪರೋಕ್ಷವಾಗಿ ಬಿಸಿ ಮುಟ್ಟಿಸಿದ್ದಾರೆ.

ಯುವಕರು, ರೈತರಿಗೆ ತಂತ್ರಜ್ಞಾನ ತಲುಪಿಸುವುದೇ ನಿಜವಾದ ಯಶಸ್ಸು

ಸಂಘಟನೆಯ ಯಶಸ್ಸನ್ನು ಕೇವಲ ಕಾಗದದ ಒಪ್ಪಂದಗಳಿಂದ ಅಳೆಯಬಾರದು ಎಂದು ಹೇಳಿದ ರಕ್ಷಣಾ ಸಚಿವರು, “ದೇಶಗಳ ಯುವಕರಿಗೆ ಸೃಷ್ಟಿಯಾಗುವ ಹೊಸ ಉದ್ಯೋಗಾವಕಾಶಗಳು, ಉದ್ಯಮಿಗಳಿಗೆ ಮುಕ್ತವಾಗುವ ಮಾರುಕಟ್ಟೆಗಳು ಹಾಗೂ ಸಣ್ಣ ವ್ಯಾಪಾರಿಗಳು ಮತ್ತು ರೈತರ ಕೈಸೇರುವ ಆಧುನಿಕ ತಂತ್ರಜ್ಞಾನಗಳ ಆಧಾರದ ಮೇಲೆ ಎಸ್‌ಸಿಒ ಒಕ್ಕೂಟದ ಯಶಸ್ಸನ್ನು ಮೌಲ್ಯೀಕರಿಸಬೇಕು”. ಕಳೆದ 25 ವರ್ಷಗಳ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದ ಒಗ್ಗಟ್ಟಿನ ಸಹಕಾರಕ್ಕೆ ಹೊಸ ಮಾರ್ಗಸೂಚಿ ಸಿದ್ಧಪಡಿಸಬೇಕಿದೆ ಎಂದು ತಿಳಿಸಿದರು.

ಇದನ್ನೂ ಓದಿ:

2027ರ ಬಜೆಟ್‌ಗೆ ಭಾರತದ ಬೆಂಬಲ

ಈ ಮಹತ್ವದ ಸಭೆಯಲ್ಲಿ ಸದಸ್ಯ ರಾಷ್ಟ್ರಗಳ ನಿಯೋಗದ ಮುಖ್ಯಸ್ಥರು ಜಂಟಿ ಪ್ರಕಟಣೆಗೆ ಸಹಿ ಹಾಕಿದರು. ಇದರೊಂದಿಗೆ 2027ರ ಒಕ್ಕೂಟದ ಬಜೆಟ್‌ ಹಾಗೂ 2026 ರಿಂದ 2030 ರವರೆಗಿನ ಬಹುಪಕ್ಷೀಯ ವ್ಯಾಪಾರ ಮತ್ತು ಆರ್ಥಿಕ ಸಹಕಾರ ಕಾರ್ಯಕ್ರಮದ ಕ್ರಿಯಾ ಯೋಜನೆಗೆ ಭಾರತವು ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿತು. ಸಭೆಯಲ್ಲಿ ಡಿಜಿಟಲ್ ಆರ್ಥಿಕತೆ, ಸಾರಿಗೆ ಮತ್ತು ಹಣಕಾಸು ವಲಯದ ಪ್ರಗತಿಯ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.

Must Read