October 20, 2026
Tuesday, October 20, 2026
spot_img

ಸಿಜೆಪಿ ನಾಯಕರ ಹೋರಾಟಕ್ಕೆ ಅಣ್ಣಾಮಲೈ ಬೆಂಬಲ: ದೆಹಲಿ ಪೊಲೀಸರ ನಡೆಗೆ ತೀವ್ರ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾಕ್ರೋಚ್ ಜನತಾ ಪಾರ್ಟಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಿರುವ ದೆಹಲಿ ಪೊಲೀಸರ ಕ್ರಮಕ್ಕೆ ತಮಿಳುನಾಡಿನ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದೆಹಲಿ ಪೊಲೀಸರು ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿರುವ ಅವರು, ಈ ರೀತಿಯ ದೀರ್ಘಾವಧಿ ಬಂಧನಗಳು ದೇಶದ ಕಾನೂನಿನ ಆಡಳಿತದ ಮೇಲೆಯೇ ಪ್ರಶ್ನೆ ಮೂಡಿಸುತ್ತಿವೆ ಎಂದು ಗುಡುಗಿದ್ದಾರೆ.

ಅವರ ಹೋರಾಟಕ್ಕೆ ಬೆಂಬಲವಿದೆ

ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ, ʼಸಿಜೆಪಿ ಪಕ್ಷದ ಪ್ರತಿಭಟನೆಯ ಶೈಲಿ ಅಥವಾ ಅವರ ಕೆಲವು ನಡವಳಿಕೆಗಳೊಂದಿಗೆ ನಾನು ಸಹಮತ ಹೊಂದಿಲ್ಲದಿರಬಹುದು. ಆದರೆ, ಅವರು ದೇಶದ ವ್ಯವಸ್ಥೆಯ ಮುಂದೆ ಎತ್ತುತ್ತಿರುವ ಪ್ರಶ್ನೆಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಆ ಪ್ರಶ್ನೆಗಳಿಗೆ ಉತ್ತರಿಸಬೇಕಾದ್ದು ಸರ್ಕಾರದ ಜವಾಬ್ದಾರಿ. ಆದರೆ, ಸಣ್ಣ ನಿಯಮ ಉಲ್ಲಂಘನೆಗಾಗಿ ಅವರನ್ನು ಬಂಧಿಸಿ, ಜೈಲಿನಲ್ಲಿ ಕಾಲ ಕಳೆಯುವಂತೆ ಮಾಡುವುದು ಆ ನಾಯಕರನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆಯೇ ಹೊರತು ದೆಹಲಿ ಪೊಲೀಸರ ಈ ನಡೆ ವ್ಯವಸ್ಥೆಗೆ ಮಾಡುತ್ತಿರುವ ದೊಡ್ಡ ದ್ರೋಹವಾಗಿದೆʼ ಎಂದು ಅಣ್ಣಾಮಲೈ ಕಿಡಿಕಾರಿದ್ದಾರೆ. ಇದೇ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರಶ್ನಿಸುವ ಹಕ್ಕಿದೆ, ಆದರೆ ಅದರಿಂದ ಸಾಂಸ್ಥಿಕ ಹಾನಿಯಾಗಬಾರದು ಎಂದು ತಿಳಿಸಿದ್ದಾರೆ.

ರಾಷ್ಟ್ರಧ್ವಜ ಹಾರಿಸಿದ್ದಕ್ಕೆ ಜೈಲು ವಾಸ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿ, ನಿಗದಿತವಲ್ಲದ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್ ಪ್ರವೇಶಿಸಿ ರಾಷ್ಟ್ರಧ್ವಜ ಹಾರಿಸಿದ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು.

 ಸೋಮವಾರ ದೆಹಲಿ ನ್ಯಾಯಾಲಯವು ಇವರ ನ್ಯಾಯಾಂಗ ಬಂಧನವನ್ನು ಮತ್ತೂ ಎರಡು ದಿನಗಳ ಕಾಲ ವಿಸ್ತರಿಸಿದೆ. ದಾಖಲೆಗಳ ತಾಳೆಯಾಗದ ಕಾರಣ ಇವರ ಜಾಮೀನನ್ನು ತಿರಸ್ಕರಿಸಲಾಗಿದ್ದು, ಬುಧವಾರ ಇವರನ್ನು ಮತ್ತೆ ಕೋರ್ಟ್‌ಗೆ ಹಾಜರುಪಡಿಸಲಾಗುವುದು. ಇನ್ನು ಜೈಲಿನಲ್ಲಿದ್ದ ಅವಧಿಯಲ್ಲೇ ಸಿಜೆಪಿ ನಾಯಕರು ದೆಹಲಿ ಹೈಕೋರ್ಟ್‌ನಲ್ಲಿ ತುರ್ತು ಮಧ್ಯರಾತ್ರಿಯ ವಿಚಾರಣೆಗಾಗಿ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ:

ಪ್ರಧಾನಿ ಮೋದಿ ನಾಯಕತ್ವ ಪ್ರಶ್ನಿಸಿದ ಸಿಜೆಪಿ ಮುಖ್ಯಸ್ಥ

ಮತ್ತೊಂದೆಡೆ, ಸಿಜೆಪಿ ಮುಖ್ಯಸ್ಥ ಅಭಿಜೀತ್ ದಿಪ್ಕೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “26 ವರ್ಷದ ಯುವಕ ಸೌರವ್ ದಾಸ್‌ನನ್ನು 5 ದಿನಗಳ ಕಾಲ ಜೈಲಿನಲ್ಲಿಟ್ಟು, ವಿದ್ಯಾರ್ಥಿಗಳನ್ನು ರಸ್ತೆಯ ಮೇಲೆ ಎಳೆದಾಡಿ, ಬ್ಯಾರಿಕೇಡ್‌ಗಳ ಹಿಂದೆ ಅಡಗಿಕೊಳ್ಳುವುದು ನರೇಂದ್ರ ಮೋದಿಯವರ ಶೌರ್ಯವೇ?” ಎಂದು ಪ್ರಶ್ನಿಸಿದ್ದಾರೆ. ಕಠಿಣ ಪರಿಸ್ಥಿತಿಯಲ್ಲೂ ಜಗ್ಗದ ಸೌರವ್ ಹಾಗೂ ರಾಂಕಾ ಅವರ ಧೈರ್ಯವನ್ನು ಅವರು ಮುಕ್ತವಾಗಿ ಶ್ಲಾಘಿಸಿದ್ದಾರೆ.

Must Read