October 21, 2026
Wednesday, October 21, 2026
spot_img

ಭಾರತ-ನ್ಯೂಝಿಲೆಂಡ್ ಟಿ20 ಸರಣಿ: ಯುವ ಬ್ಯಾಟರ್ ವೈಭವ್‌ ಬಗ್ಗೆ ಮಿಚೆಲ್ ಸ್ಯಾಂಟ್ನರ್ ಮೆಚ್ಚುಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ನ್ಯೂಝಿಲೆಂಡ್ ನಡುವಿನ 5 ಪಂದ್ಯಗಳ ರೋಚಕ ಟಿ20 ಸರಣಿಯು ಅಕ್ಟೋಬರ್ 22, 2026 ರಿಂದ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭಗೊಳ್ಳಲಿದೆ. ಈ ಮಹತ್ವದ ಸರಣಿಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್, ಭಾರತದ 15 ವರ್ಷದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರ ಬಗ್ಗೆ ನೀಡಿರುವ ಹೇಳಿಕೆಗಳು ಕ್ರಿಕೆಟ್ ಲೋಕದಲ್ಲಿ ದೊಡ್ಡ ಸಂಚಲನ ಮೂಡಿಸಿವೆ.

ಇತ್ತೀಚಿನ ವೆಸ್ಟ್ ಇಂಡೀಸ್ ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಈ ಬಗ್ಗೆ ಮಾತನಾಡಿರುವ ಸ್ಯಾಂಟ್ನರ್, ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಬಲವೇ ಇದಕ್ಕೆ ಕಾರಣ ಎಂದಿದ್ದಾರೆ. ಪ್ರಸ್ತುತ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಇಂತಹ ದಿಗ್ಗಜ ಆಟಗಾರರ ಮುಂದೆ ಯುವ ಆಟಗಾರನಿಗೆ ಸ್ಥಾನ ಸಿಗುವುದು ಕಷ್ಟ ಎಂದು ವಿವರಿಸಿದ್ದಾರೆ.

ವೈಭವ್ ಸೂರ್ಯವಂಶಿ ಅವರ ಪ್ರತಿಭೆಯನ್ನು ಐಪಿಎಲ್‌ನಲ್ಲಿ ಹತ್ತಿರದಿಂದ ನೋಡಿರುವುದಾಗಿ ಸ್ಯಾಂಟ್ನರ್ ತಿಳಿಸಿದ್ದಾರೆ. ವೈಭವ್ ಎಷ್ಟು ಅಪಾಯಕಾರಿ ಮತ್ತು ಪ್ರತಿಭಾವಂತ ಬ್ಯಾಟ್ಸ್‌ಮನ್ ಎಂಬುದು ತಮಗೆ ಚೆನ್ನಾಗಿ ತಿಳಿದಿದೆ. ಈ ಸರಣಿಯಲ್ಲಿ ಅವರಿಗೆ ಅವಕಾಶ ಸಿಗಲಿ ಅಥವಾ ಬಿಡಲಿ, ಮುಂಬರುವ ದಿನಗಳಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಈ ಯುವ ಆಟಗಾರ ಬಹಳ ದೊಡ್ಡ ಮಟ್ಟದಲ್ಲಿ ಬೆಳೆಯಲಿದ್ದಾನೆ ಎಂದು ಭವಿಷ್ಯ ನುಡಿದಿದ್ದಾರೆ.

ವೈಭವ್ ನ್ಯೂಝಿಲೆಂಡ್ ವಿರುದ್ಧ ಕಣಕ್ಕಿಳಿಯುತ್ತಾರೋ ಇಲ್ಲವೋ ಎಂಬುದು ಇನ್ನೂ ಕುತೂಹಲದ ವಿಷಯವಾಗಿದೆ. ಆದರೆ ನ್ಯೂಝಿಲೆಂಡ್ ತಂಡ ಈ ಹದಿಹರೆಯದ ಆಟಗಾರನನ್ನು ಲಘುವಾಗಿ ಪರಿಗಣಿಸುತ್ತಿಲ್ಲ. ಒಂದು ವೇಳೆ ವೈಭವ್ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದರೆ, ಅವರನ್ನು ಬೇಗನೆ ಔಟ್ ಮಾಡಲು ತಮ್ಮ ತಂಡ ಈಗಾಗಲೇ ವಿಶೇಷ ಯೋಜನೆಗಳನ್ನು ರೂಪಿಸಿದೆ ಎಂದು ಸ್ಯಾಂಟ್ನರ್ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಒಟ್ಟಿನಲ್ಲಿ, ಕ್ರೀಡಾಂಗಣದಲ್ಲಿ ವೈಭವ್ ಸೂರ್ಯವಂಶಿಯ ಆಟ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

Must Read