ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಯಾಂಗ ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ ನಾಯಕರಾದ ಸೌರವ್ ದಾಸ್ ಹಾಗೂ ಆಶುತೋಷ್ ರಾಂಕಾ ತಮ್ಮ ಅರ್ಜಿಯನ್ನು ವಾಪಾಸ್ ಪಡೆದಿದ್ದಾರೆ.
ಪ್ರಕರಣದಲ್ಲಿ ಪರ್ಯಾಯ ಕಾನೂನು ಪರಿಹಾರ ಲಭ್ಯವಿರುವುದರಿಂದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ನ್ಯಾಯಾಲಯ ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರು ಅರ್ಜಿಯ ವಿಚಾರಣೆ ನಡೆಸಿದರು. ಪ್ರಕರಣದ ಅರ್ಹತೆ ಅಥವಾ ಸತ್ಯಾಸತ್ಯತೆ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಅರ್ಜಿಯನ್ನು ಹಿಂಪಡೆಯಲು ನ್ಯಾಯಾಲಯ ಅನುಮತಿ ನೀಡಿತು.
ಬುಧವಾರ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ನಡೆದ ವಿಚಾರಣೆಯಲ್ಲಿ ಏನಾಯಿತು ಎಂಬುದನ್ನು ಗಮನಿಸುವಂತೆ ದಾಸ್ ಮತ್ತು ರಂಕಾಗೆ ನ್ಯಾಯಾಲಯ ಸಲಹೆ ನೀಡಿತು. ಆ ಬಳಿಕವೂ ತಮ್ಮ ಅಹವಾಲು ಮುಂದುವರಿದರೆ ಮೇಲ್ಮನವಿ ಸಲ್ಲಿಸಬಹುದು ಎಂದು ತಿಳಿಸಿತು. ಅಕ್ಟೋಬರ್ 19ರಂದು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಇಬ್ಬರೂ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಆದೇಶದ ಮೂಲಕ ಅವರ ನ್ಯಾಯಾಂಗ ಬಂಧನವನ್ನು ಇನ್ನೂ ಎರಡು ದಿನಗಳ ಕಾಲ, ಅಂದರೆ ಅಕ್ಟೋಬರ್ 21ರವರೆಗೆ ವಿಸ್ತರಿಸಲಾಗಿತ್ತು.
ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಹೇಳಿದರೂ ಬೀಗ ಹಾಕಿದ್ದ ಗೇಟನ್ನು ಹಾರಿ ಒಳಕ್ಕೆ ಹೋಗಿದ್ದರು. ಇದಾದ ನಂತರ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.



