ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದ ಉಧಮ್ಪುರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಮಹಿಳೆ ಹಾಗೂ ಮಗು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಆರು ಮಂದಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಇಂದು ಬೆಳಗ್ಗೆ ಪೆಚೌಂಡ್ನಿಂದ ರಾಮನಗರಕ್ಕೆ ಹೊರಟಿದ್ದ ಖಾಸಗಿ ಬಸ್ ದುರ್ಗಮ ಬೆಟ್ಟದ ಹಾದಿಯಲ್ಲಿ ಚಾಲಕನ ನಿಯಂತ್ರಣಕ್ಕೆ ಬಾರದೆ ಆಳವಾದ ಕಂದಕಕ್ಕೆ ಬಿದ್ದಿದೆ. ಬಸ್ ಭೀಕರವಾಗಿ ನಜ್ಜುಗುಜ್ಜಾಗಿದೆ.
ಸದ್ದಿನಿಂದಾಗಿ ಸ್ಥಳೀಯರು ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಕಂದಕದಲ್ಲಿದ್ದ 17 ಮಂದಿಯನ್ನು ಮೇಲಕ್ಕೆತ್ತಿ ಬಸಂತ್ಗಢದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ರಾಮನಗರ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಓರ್ವ ಮಹಿಳೆ ಮತ್ತು ಆರು ವರ್ಷದ ಬಾಲಕಿ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಉಳಿದ ಆರು ಜನರನ್ನು ಸುಧಾರಿತ ಚಿಕಿತ್ಸೆಗಾಗಿ ಉಧಮ್ಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.



