October 21, 2026
Wednesday, October 21, 2026
spot_img

ಬೆಳಿಗ್ಗೆ ಎದ್ದಾಗ ನಿಮ್ಮ ಧ್ವನಿ ಬೇರೆಯೇ ರೀತಿ ಕೇಳಿಸುತ್ತಿದೆಯೇ? ಕಂಠನಾಳದ ಈ ರಹಸ್ಯ ನಿಮಗೋತ್ತೇ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ಬೆಳಿಗ್ಗೆ ಎದ್ದ ತಕ್ಷಣ ಮಾತನಾಡುವಾಗ ನಮ್ಮ ಧ್ವನಿ ಕೊಂಚ ಗಂಭೀರವಾಗಿ, ಹೆವಿಯಾಗಿ ಕೇಳಿಸುತ್ತದೆ. ಆದರೆ, ದಿನ ಕಳೆದಂತೆ ಮಧ್ಯಾಹ್ನದ ವೇಳೆಗೆ ಧ್ವನಿ ಮತ್ತೆ ಯಥಾರೂಪಕ್ಕೆ ಮರಳುತ್ತದೆ. ಇದು ಎಲ್ಲರ ಜೀವನದಲ್ಲೂ ನಡೆಯುವ ಸಾಮಾನ್ಯ ಸಂಗತಿ. ಆದರೆ ಇದರ ಹಿಂದಿರುವ ವೈಜ್ಞಾನಿಕ ಕಾರಣವೇನು ಗೊತ್ತೇ?

ನಾವು ಮಾತನಾಡುವಾಗ ಗಂಟಲಿನಲ್ಲಿರುವ ‘ವೋಕಲ್ ಕಾರ್ಡ್ಸ್’ ಅಥವಾ ಧ್ವನಿ ತಂತುಗಳು ವೇಗವಾಗಿ ಕಂಪಿಸಿ ಶಬ್ದವನ್ನು ಹೊರಡಿಸುತ್ತವೆ. ಆದರೆ, ರಾತ್ರಿಯಿಡೀ ನಾವು ಮಲಗಿದ್ದಾಗ ಯಾವುದೇ ಮಾತುಗಳಿಲ್ಲದೆ ಈ ಧ್ವನಿ ತಂತುಗಳು ಸಂಪೂರ್ಣ ವಿಶ್ರಾಂತಿ ಸ್ಥಿತಿಯಲ್ಲಿರುತ್ತವೆ. ದೀರ್ಘಕಾಲದ ವಿಶ್ರಾಂತಿಯಿಂದಾಗಿ ಅವು ಕೊಂಚ ಸಡಿಲಗೊಂಡು, ದಪ್ಪವಾಗಿರುತ್ತವೆ. ಹೀಗಾಗಿ ಬೆಳಿಗ್ಗೆ ಮಾತನಾಡಲು ಹೊರಟಾಗ ಧ್ವನಿ ತಂತುಗಳ ಕಂಪನ ನಿಧಾನವಾಗಿ, ಧ್ವನಿಯು ಆಳವಾಗಿ ಮತ್ತು ಗಂಭೀರವಾಗಿ ಕೇಳಿಸುತ್ತದೆ.

ನಾವು ರಾತ್ರಿಯಿಡೀ ಮಲಗಿದ್ದಾಗ ಗಂಟಲಿನ ಭಾಗದಲ್ಲಿ ಸ್ವಲ್ಪ ಪ್ರಮಾಣದ ನೀರು ಅಥವಾ ದ್ರವ ಶೇಖರಣೆಯಾಗುತ್ತದೆ. ಜೊತೆಗೆ, ಬಾಯಿಯಿಂದ ಉಸಿರಾಡುವುದು ಅಥವಾ ಕೋಣೆಯ ಒಣ ಹವೆಯಿಂದಾಗಿ ಗಂಟಲಿನ ಲೋಳೆಯ ಪದರ ಒಣಗಿರುತ್ತದೆ. ಈ ಶುಷ್ಕತೆ ಮತ್ತು ದ್ರವದ ಶೇಖರಣೆಯು ಧ್ವನಿಯಲ್ಲಿ ಗಡಸುತನ ಮೂಡಲು ಮುಖ್ಯ ಕಾರಣವಾಗಿದೆ.

ಬೆಳಿಗ್ಗೆ ಎದ್ದು ನೀರು ಕುಡಿದಾಗ, ಮುಖ ತೊಳೆದು ಮಾತನಾಡಲು ಪ್ರಾರಂಭಿಸಿದಾಗ ಗಂಟಲಿನಲ್ಲಿರುವ ದ್ರವ ಕರಗುತ್ತದೆ ಮತ್ತು ಧ್ವನಿ ತಂತುಗಳು ಬಿಸಿಯಾಗುತ್ತವೆ. ಹಗಲಿನಲ್ಲಿ ನಾವು ಸತತವಾಗಿ ಉಸಿರಾಡುವುದರಿಂದ, ನೀರು ಕುಡಿಯುವುದರಿಂದ ಮತ್ತು ಮಾತನಾಡುವುದರಿಂದ ಧ್ವನಿ ತಂತುಗಳು ಬಿಗಿಯಾಗಿ, ತಮ್ಮ ನೈಜ ಸ್ಥಿತಿಗೆ ಮರಳುತ್ತವೆ. ಇದರಿಂದಾಗಿ ಮಧ್ಯಾಹ್ನದ ವೇಳೆಗೆ ನಮ್ಮ ಧ್ವನಿ ತಾನಾಗಿಯೇ ಸಾಮಾನ್ಯ ಸ್ಥಿತಿಗೆ ಬರುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ಉಗುರುಬೆಚ್ಚಗಿನ ನೀರು ಕುಡಿಯುವುದರಿಂದ ಗಂಟಲಿನ ಶುಷ್ಕತೆ ನೀಗಿ ಧ್ವನಿ ಬೇಗನೆ ಸ್ಪಷ್ಟವಾಗುತ್ತದೆ. ಮುಂಜಾನೆಯ ಗಂಭೀರ ಧ್ವನಿ ಯಾವುದೇ ಕಾಯಿಲೆಯಲ್ಲ, ಅದು ನಮ್ಮ ದೇಹದ ನೈಸರ್ಗಿಕ ಕ್ರಿಯೆಯಷ್ಟೇ

Must Read