ಹೊಸದಿಗಂತ ವರದಿ ಮಡಿಕೇರಿ:
ಐತಿಹಾಸಿಕ ಹಿನ್ನೆಲೆ ಇರುವ ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ (ಇಂದು)/ರಾತ್ರಿ ಮಡಿಕೇರಿ ನಗರದ ನಾಲ್ಕೂ ದಿಕ್ಕುಗಳಿಂದ ಹೊರಡುವ ದಶಮಂಟಪಗಳ ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ಒಂದು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ದಸರಾ ಉತ್ಸವದ ಹಿನ್ನೆಲೆಯಲ್ಲಿ ಮಡಿಕೇರಿ ನಗರ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದು, ವಿವಿಧ ದೇವಾಲಯಗಳು ನವರಾತ್ರಿ ಉತ್ಸವಕ್ಕಾಗಿ ಶೃಂಗರಿಸಲ್ಪಟ್ಟಿವೆ.
ನಗರದ ದಶ ದೇವಾಲಯಗಳಿಂದ ಹೊರಡಲಿರುವ ದಶ ಮಂಟಪಗಳ ಶೋಭಾಯಾತ್ರೆ ಗುರುವಾರ ಮುಂಜಾನೆವರೆಗೂ ನಗರದ ಮುಖ್ಯ ಬೀದಿಯ ಮೂಲಕ ಸಂಚರಿಸಿ ಮಹದೇವಪೇಟೆಯಲ್ಲಿರುವ ಬನ್ನಿಮಂಟಪಕ್ಕೆ ತಲುಪಲಿವೆ.
ನಗರದ ನಾಲ್ಕು ಶಕ್ತಿದೇವತೆಗಳ ಕರಗಗಳೂ ಗುರುವಾರ ಬೆಳಗ್ಗೆ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವ ಮೂಲಕ ಮಡಿಕೇರಿ ದಸರಾಕ್ಕೆ ತೆರೆ ಬೀಳಲಿದೆ.
ಬಿಗು ಬಂದೋಬಸ್ತ್: ದಸರಾ ವೀಕ್ಷಣೆಗೆ ಆಗಮಿಸುವವರ ಸುರಕ್ಷತೆಗಾಗಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 1500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದ್ದು, ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ.
ಮದ್ಯ ಮಾರಾಟ ನಿಷೇಧ: ಮಡಿಕೇರಿ ದಸರಾ ಹಿನ್ನೆಲೆಯಲ್ಲಿ ಅ. 21ರ ಬೆಳಗ್ಗೆ 6 ರಿಂದ ಅ. 22 ರ ಸಂಜೆ 6 ಗಂಟೆವರೆಗೆ ಮಡಿಕೇರಿ ನಗರ ಠಾಣಾ ಸರಹದ್ದಿನ ಸುತ್ತಮುತ್ತ 5 ಕಿ.ಮೀ ವ್ಯಾಪ್ತಿಯಲ್ಲಿ ಹಾಗೂ ಸುಂಟಿಕೊಪ್ಪ ಹಾಗೂ ಬೆಟ್ಟಗೇರಿ, ಮೂರ್ನಾಡು ನಗರ ವ್ಯಾಪ್ತಿಯವರೆಗೆ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಆದೇಶ ಹೊರಡಿಸಿದ್ದಾರೆ.
ವಾಹನ ಸಂಚಾರ ನಿಷೇಧ: ದಸರಾ ವೀಕ್ಷಣೆಗೆ ಲಕ್ಷಾಂತರ ಪ್ರೇಕ್ಷಕರು ಆಗಮಿಸಲಿರುವುದರಿಂದ ಬುಧವಾರ ಅಪರಾಹ್ನದಿಂದ ಗುರುವಾರ ಮಧ್ಯಾಹ್ನದವರೆಗೂ ಮಡಿಕೇರಿ ನಗರದೊಳಗೆ ವಾಹನ ಸಂಚಾರ ನಿಷೇಧಿಸಲಾಗಿದೆ.
ಜನಮನ ಸೂರೆಗೊಳ್ಳಲಿರುವ ದಶಮಂಟಪಗಳ ಕಥಾನಕಗಳು
ಮಡಿಕೇರಿ ದಸರಾದ ರೂವಾರಿ ಎಂದೇ ಕರೆಯಲಾಗುವ ಪೇಟೆ ಶ್ರೀ ರಾಮಮಂದಿರ ದೇವಾಲಯದಿಂದ ಈ ಬಾರಿ ‘ಶ್ರೀಲಕ್ಷ್ಮೀ ನರಸಿಂಹ ದರ್ಶನ’ದ ಕಥಾನಕವನ್ನು ಹೊಂದಿರುವ ಮಂಟಪವನ್ನು ಹೊರಡಿಸಲಿದೆ.
ನಗರದ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯವು ಈ ಬಾರಿ ‘ಮಣಿಕಂಠನಿಂದ ಮಹಿಷಿಯ ಸಂಹಾರ’ ಎಂಬ ಕಥಾನಕವನ್ನು ಪ್ರಸ್ತುತಪಡಿಸಲಿದೆ.
ನಗರದ ಶ್ರೀ ಕಂಚಿಕಾಮಾಕ್ಷಮ್ಮ ಮತ್ತು ಮುತ್ತುಮಾರಿಯಮ್ಮ ಬಾಲಕ ಮಂಡಳಿಯು ಈ ಬಾರಿ ಕಾರ್ತಿಕೇಯ ಮತ್ತು ಸೂರಪದ್ಮನ ಮಹಾಸಂಗ್ರಾಮ ಎಂಬ ಅಪರೂಪದ ಕಥಾನಕವನ್ನು ಪ್ರದರ್ಶಿಸಲಿದೆ.
ನಗರದ ಚೌಡೇಶ್ವರಿ ದೇವಾಲಯದ ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯು ಈ ಬಾರಿ ‘ಗಣಪತಿಗೆ ಗಜಮುಖ ಪ್ರಾಪ್ತಿ ಮತ್ತು ಗಣಪತಿಯಿಂದ ಗಜಾಸುರನ ವಧಾಖ್ಯಾನ’ ಎಂಬ ಕಥಾ ಹಂದರವನ್ನಿಟ್ಟುಕೊಂಡು ಮಂಟಪ ನಿರ್ಮಿಸಿದೆ.
ಕರವಲೆ ಭಗವತಿ ಮಹಿಷ ಮರ್ಧಿನಿ ದೇವಾಲಯದಿಂದ ‘ಶ್ರೀಕೃಷ್ಣನ ಬಾಲಲೀಲೆ, ರಾಕ್ಷಸರ ಸಂಹಾರ, ಕಾಳಿಂಗ ಮರ್ಧನ ಕಥಾನಕವನ್ನು ಪ್ರದರ್ಶನಕ್ಕೆ ಆಯ್ದುಕೊಂಡಿದೆ.
ಕೋಟೆ ಮಾರಿಯಮ್ಮ ದೇವಾಲಯವು ಈ ವರ್ಷ ‘ಧೂಮ್ರಕೇತು ಗಣಪತಿಯಿಂದ ಧೂಮ್ರಾಕ್ಷಾಸುರ ಸಂಹಾರ’ದ ಕಥಾನಕವನ್ನು ಅಳವಡಿಸಲಿದೆ.
ಕೋದಂಡರಾಮ ದೇವಾಲಯದ ಮಂಟಪವು ‘ರಾಮಕಥಾಮೃತ’ ವನ್ನು ನೋಡುಗರಿಗೆ ಉಣಬಡಿಸಲಿದೆ.
ದೇಚೂರು ರಾಮ ಮಂದಿರದ ಮಂಟಪ ಸಮಿತಿ ಈ ವರ್ಷ ‘ಶತಮಹಿಷಿ’ ಎಂಬ ಕಥಾವಸ್ತುವನ್ನು ಪ್ರದರ್ಶನಕ್ಕೆ ಆಯ್ದುಕೊಂಡಿದೆ.
ದಂಡಿನ ಮಾರಿಯಮ್ಮ ದೇವಾಲಯವು ‘ಮಹಾ ಕಾಮೇಶ್ವರಾಸ್ತ್ರದಿಂದ ಲಲಿತಾಂಬಿಕೆಯಿಂದ ಭಂಡಾಸುರನ ವಧೆ’ ಎಂಬ ಕಥಾನಕವನ್ನು ಆಯ್ಕೆ ಮಾಡಿಕೊಂಡಿದೆ.
ಕೋಟೆ ಮಹಾಗಣಪತಿ ಸಮಿತಿ ಈ ಬಾರಿ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ‘ಮಹಾಗಣಪತಿಯಿಂದ ಶಿವಾಂಶ ಕ್ರೋಧಾಸುರನ ಸಂಹಾರ’ ಎಂಬ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿದೆ.



