ಹೊಸದಿಗಂತ ವರದಿ ಬೆಳಗಾವಿ:
ಪತ್ನಿಯ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಕುಡಿದ ಮತ್ತಿನಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಘಟನೆ ಬೆಳಗಾವಿ ನಗರದ ಹನುಮಾನ ನಗರದಲ್ಲಿ ನಡೆದಿದೆ.
ಧಾರವಾಡ ಜಿಲ್ಲೆಯ ಚಿಕ್ಕಮಲ್ಲಿಗವಾಡ ಗ್ರಾಮದ ಅಶ್ವಿನಿ ಹೆಗಡೆ ಕೊಲೆಯಾದ ಮಹಿಳೆ. ಕೊಲೆ ಆರೋಪದ ಮೇಲೆ ಪತಿ ವಿಠ್ಠಲ್ ಹೆಗಡೆಯನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಮಾರು ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ ಜೀವನೋಪಾಯಕ್ಕಾಗಿ ಬೆಳಗಾವಿಯಲ್ಲಿ ನೆಲೆಸಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಪತ್ನಿಯ ಶೀಲದ ಬಗ್ಗೆ ಅನುಮಾನಪಡುತ್ತಿದ್ದ ವಿಠ್ಠಲ್, ಕ್ಷುಲ್ಲಕ ಕಾರಣಗಳಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.
ದಸರಾ ಹಬ್ಬದ ಸಂದರ್ಭದಲ್ಲಿ ಅಶ್ವಿನಿ ತಾಯಿಯ ಮನೆಗೆ ತೆರಳಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಮಾವನಿಗೆ ಊಟ ನೀಡಲು ಮನೆಗೆ ಬಂದಿದ್ದ ವೇಳೆ, ಕುಡಿದ ಮತ್ತಿನಲ್ಲಿದ್ದ ವಿಠ್ಠಲ್ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಅಶ್ವಿನಿ ತಾಯಿ ಆರೋಪಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ತಾಯಿಯನ್ನು ಕಳೆದುಕೊಂಡ ಇಬ್ಬರು ಮಕ್ಕಳ ಭವಿಷ್ಯದ ಬಗ್ಗೆ ಕುಟುಂಬಸ್ಥರು ಹಾಗೂ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.



