ಹೊಸದಿಗಂತ ವರದಿ ವಿಜಯಪುರ:
ಬಿ.ವೈ. ವಿಜಯೇಂದ್ರ ಜೊತೆ ಯಾವ ರಾಜಕೀಯ ಚರ್ಚೆ ಮಾಡುವ ಅವಶ್ಯಕತೆ ಇಲ್ಲ, ವ್ಯಕ್ತಿಯೊಬ್ಬರ ಮನೆಗೆ ಹೋದಾಗ ವಿಜಯೇಂದ್ರ ಮುಖಾಮುಖಿಯಾದರು, ಆರಾಮಾ, ಆರಾಮಾ ಎಂಬ ಮಾತು ಬಿಟ್ಟರೆ ಉಳಿದ ಮಾತುಕತೆ ನಡೆಸಿಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಜೊತೆ ಮಾತುಕತೆ ನಡೆಸುವ ಅವಶ್ಯಕತೆಯೂ ನನಗಿಲ್ಲ. ವ್ಯಕ್ತಿಯೊಬ್ಬರು ನನಗೆ ಕಾಫಿ ಕುಡಿಯಲು ಕರೆದಿದ್ದರು, ಅಲ್ಲಿ ವಿಜಯೇಂದ್ರ ಸಹ ಬಂದರು, ಅಲ್ಲಿ ಸೌಜನ್ಯಯುತವಾಗಿ ಕೇವಲ ಆರಾಮಾ ಆರಾಮಾ ಎಂಬ ಮಾತು ನಡೆದಿದೆ, ಅದನ್ನು ಬಿಟ್ಟು ಯಾವುದೇ ಮಾತುಕತೆ ಮಾಡಿಲ್ಲ, ವಿಜಯೇಂದ್ರ ಬದಲಾವಣೆಯಾದ ಬಳಿಕಷ್ಟವೇ ನನ್ನ ಮಾತುಕತೆ ಎಂದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಮನೆಯಲ್ಲಿ ದಸರಾ ಹಬ್ಬಕ್ಕೆ ಹೋದಾಗ ನಿರಾಣಿ ಭೇಟಿಯಾಗಿದ್ದಾರೆ ಯಾರ ಜೊತೆಗೂ ನಾವೇನು ರಾಜಕೀಯ ಮಾತನಾಡಿಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಳಿಕವೇ ಮುಂದಿನ ಮಾತುಕತೆ ಎಂದು ಅವರಿಗೂ ಸ್ಪಷ್ಟವಾಗಿ ಹೇಳಿರುವೆ ಎಂದರು.
ಏಕವಚನದಲ್ಲಿಯೇ ವಿಜಯೇಂದ್ರ ಅವರ ವಿರುದ್ಧ ಪುನಃ ಗುಡುಗಿರುವ ಶಾಸಕ ಯತ್ನಾಳ, ವಿಜಯೇಂದ್ರ ಅವರು ನನಗೆ ವೈಯುಕ್ತಿಕವಾಗಿ ದ್ವೇಷ ಸಾಧಿಸಿದ್ದಾರೆ, ನಾನು ಅವರ ಪ್ರತಿಸ್ಪರ್ಧಿ ಎಂದು ನನ್ನನ್ನು ತುಳಿಯುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಅವರಪ್ಪ ಸಿಎಂ ಆಗಿದ್ದಾಗ ನನ್ನ ಲೆಟರಗಳನ್ನ ಹರಿದು ಹಾಕಿದ್ದಾರೆ, ನನಗೆ ಯಾವುದೇ ಅನುದಾನ ಬಾರದಂತೆ ತಡೆಹಿಡಿದಿದ್ದಾರೆ, ನನ್ನನ್ನು ಹತ್ತಿಕ್ಕಲು ಎಲ್ಲಾ ಕೆಲಸ ಮಾಡಿದ್ದಾರೆ, ಅವರಿಗೆ ಪ್ರತಿಸ್ಪರ್ಧಿಯೆಂದು ದ್ವೇಷ ಮಾಡಿದ್ದಾರೆನನ್ನ ವಿರುದ್ದ ವೈಯಕ್ತಿಕವಾಗಿ ವಿಜಯೇಂದ್ರಗೆ ತುಂಬಾ ದ್ವೇಷ ತುಂಬಿಕೊಂಡಿದೆ ಎಂದರು.
ಹೈಕಮಾಂಡ್ ಭೇಟಿಯಾಗುವುದಿಲ್ಲ
ನವದೆಹಲಿಗೆ ಹೋಗುತ್ತಿರುವುದು ಸತ್ಯ. ನವದೆಹಲಿಯ ಸಂಸತ್ ಆವರಣದಲ್ಲಿ ಕಿತ್ತೂರ ರಾಣಿ ಚನ್ಮಮ್ಮ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕಾಗಿ ಹೋಗುತ್ತಿರುವೆ, ಕೇಂದ್ರ ಸಚಿವ ವಿ. ಸೋಮಣ್ಣ ಆಹ್ವಾನ ನೀಡಿದ್ದು, ಈ ಅಪೂರ್ವ ಕಾರ್ಯಕ್ರಮಕ್ಕೆ ಹಾಜರಾಗಲು ನವದೆಹಲಿಗೆ ಹೋಗುತ್ತಿರುವೆ, ಆದರೆ ದೆಹಲಿಯಲ್ಲಿ ಯಾವುದೇ ರಾಷ್ಟ್ರೀಯ ನಾಯಕರನ್ನ ಭೇಟಿಯಾಗಲ್ಲ ಎಂದರು.
ಇನ್ನೂ ಕಬ್ಬು ಹೋರಾಟದ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆಯುವ ಪ್ರಯತ್ನ ಮಾಡುವೆ, ಎಥೆನಾಲ್ ಮೊಲೈಸಿಸ್ ಸಮಸ್ಯೆಯ ಕುರಿತು ಗಮನ ಸೆಳೆಯುತ್ತೇನೆ, ಇಥೆನಾಲ್ ಹಾಗೂ ಮೋಲೈಸಿಸ್ ಖರೀದಿ ಇಲ್ಲಾ ಎಂದು ಕೇಂದ್ರ ಸರ್ಕಾರ ತೀರ್ಮಾಣ ತೆಗೆದುಕೊಂಡಿದೆ, ಆದರೆ ಈಗ ಸಕ್ಕರೆ ಉತ್ಪಾದನೆಗಿಂತ ಎಥೆನಾಲ್ ಹೆಚ್ಚು ಉತ್ಪಾದನೆಯಾಗಿದೆ, ಹೀಗಾಗಿ ಈ ವಿಷಯದ ಕುರಿತು ಸಚಿವ ನಿತೀನ್ ಗಡ್ಕರಿ ಹಾಗೂ ಇತರರ ಜೊತೆಗೆ ಮಾತನಾಡುತ್ತೇನೆ, ಬಿಜೆಪಿ ಘರ್ ವಾಪಾಸ್ಸಾತಿ ಕುರಿತು ಮಾತನಾಡುವುದಿಲ್ಲ. ಈ ಬಗ್ಗೆ ಬೆಳವಣಿಗೆ ನಡೆಯುತ್ತಿದ್ದರೆ ದೆಹಲಿ ನಾಯಕರು ರಾಜ್ಯಕ್ಕೆ ಬಂದು ಮಾತನಾಡುತ್ತಾರೆ, ಇಲ್ಲವೇ ದೆಹಲಿಗೆ ನಮ್ಮನ್ನು ಕರೆಯಿಸಿಕೊಳ್ಳುತ್ತಾರೆ, ಎಲ್ಲವೂ ಗುಪ್ತವಾಗಿಯೇ ನಡೆಯುತ್ತವೆ. ಆದರೆ ಸದ್ಯ ಯಾವುದೇ ಮಾತುಕತೆಗಾಗಿ ನಾನು ದೆಹಲಿಗೆ ಹೋಗುತ್ತಿಲ್ಲ ಎಂದರು.
ಇದನ್ನೂ ಓದಿ:
ನವದೆಹಲಿಯಲ್ಲಿ ನನ್ನ ಬಗ್ಗೆ ಚರ್ಚೆ
ಆದರೆ ದೆಹಲಿ ಮಟ್ಟದಲ್ಲಿ ನಾನು ಬಿಜೆಪಿ ವಾಪಸಾತಿ ಕುರಿತು ಚರ್ಚೆ ನಡೆಯುತ್ತಿದೆ, ಬಿಜೆಪಿಯಲ್ಲಿ ಸೂಕ್ತಸ್ಥಾನಮಾನ ನೀಡಿದರೆ ಮಾತ್ರ ವಾಪಸ್ ಆಗುವೆ, ಇಲ್ಲದಿದ್ದರೆ ಜೆಸಿಬಿ ಇದ್ದೆ ಇದೆ. ವಿಜಯೇಂದ್ರ ಬದಲಾವಣೆ ಮಾಡಿದ ಬಳಿಕ ಮಾತುಕತೆಗಳು ಚುರುಕುಗೊಳ್ಳುತ್ತವೆ, ಅಲ್ಲಿಯವರೆಗೆ ಯಾವ ಮಾತುಕತೆಗೆ ನಾನು ಸಿದ್ಧವಿಲ್ಲ ಎಂದು ಪುನರುಚ್ಚರಿಸಿದರು.



