October 22, 2026
Thursday, October 22, 2026
spot_img

ಜಂಬೂಸಾವರಿ ನೋಡಲು ಬಂದ ಕಂದಮ್ಮನ ಮೇಲೆ ಪೊಲೀಸರ ಲಾಠಿ ಪ್ರಹಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸಾವರಿ ಕಣ್ತುಂಬಿಕೊಳ್ಳಲು ತಮ್ಮ ನಾಲ್ಕು ವರ್ಷದ ಮಗುವನ್ನು ಕರೆತಂದಿದ್ದ ಪೋಷಕರಿಗೆ ದೊಡ್ಡ ಆಘಾತವೊಂದು ಎದುರಾಗಿದೆ. ದಸರಾ ವೀಕ್ಷಣೆಗೆ ಬಂದಿದ್ದ ಬಾಲಕನೊಬ್ಬ ಪೊಲೀಸರ ಲಾಠಿ ಏಟಿಗೆ ಗಂಭೀರವಾಗಿ ಗಾಯಗೊಂಡು ಪ್ರಸ್ತುತ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಾವುಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಬುಧವಾರ ಸಂಜೆ ಮೈಸೂರಿನ ಹೈವೇ ಸರ್ಕಲ್ ಬಳಿ ಅಪಾರ ಜನಸ್ತೋಮ ಜಮಾಯಿಸಿತ್ತು. ದಸರಾ ಜಂಬೂಸಾವರಿ ಮೆರವಣಿಗೆಯನ್ನು ವೀಕ್ಷಿಸಲು ತಂದೆ ಗಿರೀಶ್ ಹಾಗೂ ತಾಯಿಯೊಂದಿಗೆ ಬಂದಿದ್ದ ನಾಲ್ಕು ವರ್ಷದ ಪುಟ್ಟ ಬಾಲಕ ಶಿಶಿರ್, ತನ್ನ ಪೋಷಕರ ಪಕ್ಕದಲ್ಲೇ ನಿಂತಿದ್ದನು. ಈ ವೇಳೆ ಜನಸಂದಣಿಯನ್ನು ನಿಯಂತ್ರಿಸಲು ಕರ್ತವ್ಯದಲ್ಲಿದ್ದ ಪೊಲೀಸರು ಏಕಾಏಕಿ ಲಾಠಿಚಾರ್ಜ್ ನಡೆಸಿದ್ದಾರೆ ಎನ್ನಲಾಗಿದೆ. ದುರದೃಷ್ಟವಶಾತ್, ಪೊಲೀಸರ ಲಾಠಿ ಆ ಮುಗ್ಧ ಬಾಲಕನ ತಲೆಗೆ ಬಲವಾಗಿ ಬಡಿದಿದೆ.

ಲಾಠಿ ಬೀಸಿದ ರಭಸಕ್ಕೆ ಪುಟ್ಟ ಬಾಲಕ ಶಿಶಿರ್ ತಲೆಯಿಂದ ರಕ್ತ ಸುರಿಯಲು ಆರಂಭಿಸಿತು. ಇದನ್ನು ಕಂಡು ಬೆಚ್ಚಿಬಿದ್ದ ಪೋಷಕರು ಗಾಬರಿಯಿಂದ ಮಗುವನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಮಗುವಿನ ತಲೆಗೆ ತೀವ್ರ ಪೆಟ್ಟಾಗಿದ್ದು, ವೈದ್ಯರು ತುರ್ತು ಚಿಕಿತ್ಸೆ ನೀಡಿ ಹೊಲಿಗೆ ಹಾಕಿದ್ದಾರೆ. ಸದ್ಯ ಮಗು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದೆಯೇ ಎಂಬುದನ್ನು ಪರೀಕ್ಷಿಸಲು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಬೇಕಾಗಬಹುದು ಎಂದು ತಿಳಿಸಿರುವುದು ಕುಟುಂಬಸ್ಥರ ಆತಂಕವನ್ನು ಇಮ್ಮಡಿಗೊಳಿಸಿದೆ.

ಈ ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಬಾಲಕನ ತಂದೆ ಗಿರೀಶ್, “ನಮ್ಮ ಮಗುವಿಗೆ ದಸರಾ ತೋರಿಸಲು ಕರೆತಂದಿದ್ದೆವು, ಆದರೆ ರಕ್ತದ ಮಡುವಿನಲ್ಲಿ ಒದ್ದಾಡುವುದನ್ನು ನೋಡುವ ದುಸ್ಥಿತಿ ಬಂತು. ಒಂದು ಪುಟ್ಟ ಮಗುವಿನ ಮೇಲೆ ಲಾಠಿ ಬೀಸುವುದು ಎಷ್ಟು ಸರಿ? ಎಂದು ಕಣ್ಣೀರಿಟ್ಟಿದ್ದಾರೆ. ಮತ್ತೊಂದೆಡೆ, ಮಾಜಿ ಕಾರ್ಪೊರೇಟರ್ ರಂಗಸ್ವಾಮಿ ಮಾತನಾಡಿ, ಮಗುವಿನ ಮೇಲೆ ಹಲ್ಲೆ ನಡೆಸಿದ ಜವಾಬ್ದಾರಿಯುತ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡುವುದಾಗಿ ತಿಳಿಸಿದ್ದಾರೆ. ಜಂಬೂಸಾವರಿಯ ಕಳೆಗಟ್ಟಿದ ಸಂಭ್ರಮದಲ್ಲಿ ಇಂತಹ ಬೇಜವಾಬ್ದಾರಿ ಘಟನೆಗಳು ನಡೆಯಬಾರದು ಎಂದು ಸಾರ್ವಜನಿಕರು ತೀವ್ರವಾಗಿ ಖಂಡಿಸುತ್ತಿದ್ದಾರೆ.

Must Read