October 22, 2026
Thursday, October 22, 2026
spot_img

ಮೈಸೂರು ದಸರಾ ಶಿಷ್ಟಾಚಾರ ಉಲ್ಲಂಘನೆ ಆರೋಪ: ಸಿಎಂ ಪತ್ನಿ ಪುಷ್ಪಾರ್ಚನೆಗೆ ಶಾಸಕರ ಕಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೈಸೂರು ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿಗಳ ಪತ್ನಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡಿರುವುದು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದ್ದು, ಇದು ಸಂಪೂರ್ಣ ಶಿಷ್ಟಾಚಾರದ ಉಲ್ಲಂಘನೆ ಎಂದು ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರು ಜಿಲ್ಲಾಡಳಿತ ಹಾಗೂ ಸರ್ಕಾರದ ನಡೆಗೆ ಆಕ್ರೋಶ ಹೊರಹಾಕಿರುವ ಅವರು, ಮೈಸೂರು ಮಹಾರಾಣಿಯರೇ ಎಂದೂ ಪುಷ್ಪಾರ್ಚನೆ ಮಾಡಲು ವೇದಿಕೆ ಹತ್ತುತ್ತಿರಲಿಲ್ಲ ಎಂದು ನೆನಪಿಸಿದ್ದಾರೆ.

ಸಿಎಂ ಪತ್ನಿಗೆ ಯಾವ ಪ್ರೋಟೋಕಾಲ್ ಇದೆ?

ದಸರಾ ಜಂಬೂಸವಾರಿ ಯಶಸ್ವಿಯಾಗಿ ಮುಕ್ತಾಯಗೊಂಡ ಬೆನ್ನಲ್ಲೇ ಈ ಅಪಸ್ವರ ಕೇಳಿಬಂದಿದ್ದು, ಶಾಸಕ ಶ್ರೀವತ್ಸ ಅವರು ಜಿಲ್ಲಾಡಳಿತದ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ. “ಮುಖ್ಯಮಂತ್ರಿಗಳ ಪತ್ನಿಯವರಿಗೆ ಪುಷ್ಪಾರ್ಚನೆ ಮಾಡಲು ಯಾವ ಶಿಷ್ಟಾಚಾರದ ಅಡಿ ಅವಕಾಶ ನೀಡಲಾಗಿದೆ? ಅವರನ್ನು ತಡೆಯುವ ಧೈರ್ಯ ಮೈಸೂರು ಜಿಲ್ಲಾಧಿಕಾರಿಗೆ ಇರಲಿಲ್ಲವೇ?” ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ. ಭದ್ರತಾ ಲೋಪದ ಬಗ್ಗೆಯೂ ಮಾತನಾಡಿದ ಅವರು, ಹಿರಿಯ ಪೊಲೀಸ್ ಅಧಿಕಾರಿಗಳು (DGP) ಕೆಳಗೆ ನಿಂತಿದ್ದರೆ, ಮೈಸೂರು ಕಮಿಷನರ್ ವೇದಿಕೆ ಮೇಲಿಂದ ಪುಷ್ಪಾರ್ಚನೆ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

ದಲಿತ ಸಚಿವರನ್ನು ತಡೆದಿದ್ದಕ್ಕೆ ಆಕ್ರೋಶ

ಇದೇ ಕಾರ್ಯಕ್ರಮದ ವೇಳೆ ಮತ್ತೊಂದು ದೊಡ್ಡ ವಿವಾದ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ವೇದಿಕೆಗೆ ತೆರಳುತ್ತಿದ್ದ ದಲಿತ ಸಮುದಾಯದ ಹಿರಿಯ ಸಚಿವರಾದ ಎಚ್.ಸಿ. ಮಹದೇವಪ್ಪ ಹಾಗೂ ನರೇಂದ್ರ ಸ್ವಾಮಿ ಅವರನ್ನು ಐಪಿಎಸ್ ಅಧಿಕಾರಿಯೊಬ್ಬರು ತಡೆದಿದ್ದರು. ಒಂದು ಕಡೆ ಸಚಿವರನ್ನು ತಡೆಯುವುದು, ಇನ್ನೊಂದೆಡೆ ಪ್ರೋಟೋಕಾಲ್ ಇಲ್ಲದವರನ್ನು ಪುಷ್ಪಾರ್ಚನೆಗೆ ಬಿಡುವುದು ಜಿಲ್ಲಾಡಳಿತದ ತಾರತಮ್ಯವನ್ನು ತೋರಿಸುತ್ತದೆ ಎಂದು ಶಾಸಕ ಶ್ರೀವತ್ಸ ಟೀಕಿಸಿದ್ದಾರೆ.

ಇದನ್ನೂ ಓದಿ:

ತನಿಖೆಗೆ ಆದೇಶಿಸಿದ ಸರ್ಕಾರ

ಸಚಿವರನ್ನು ತಡೆದ ಘಟನೆಯು ಸದ್ಯ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಇತ್ತ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಖುದ್ದಾಗಿ ಸಚಿವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದು, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸುವಂತೆ ಡಿಜಿ-ಐಜಿಪಿಯವರಿಗೆ ಸೂಚನೆ ನೀಡಿದ್ದಾರೆ.

Must Read