ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಪ್ರಿಯಾ ಸುದೀಪ್ ದಂಪತಿ ತಮ್ಮ 25ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಅತ್ಯಂತ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಅಕ್ಟೋಬರ್ 18 ರಂದು ಇವರ ನಿವಾಸದಲ್ಲಿ ವಿಶೇಷ ಪೂಜೆ ಹಾಗೂ ಅದ್ಧೂರಿ ಸಮಾರಂಭ ನಡೆದಿದ್ದು, ಕುಟುಂಬದ ಹಿರಿಯರನ್ನು ಸ್ಮರಿಸುವ ಮೂಲಕ ಈ ಜೋಡಿ ಎಲ್ಲರ ಗಮನ ಸೆಳೆದಿದೆ.
ಅತ್ತೆಯ ಮದುವೆ ಸೀರೆಯಲ್ಲಿ ಮಿಂಚಿದ ಸೊಸೆ
ಈ ವಿಶೇಷ ದಿನದಂದು ಪ್ರಿಯಾ ಸುದೀಪ್ ಅವರು ಧರಿಸಿದ್ದ ಉಡುಪು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಪ್ರಿಯಾ ಅವರು ಸುದೀಪ್ ಅವರ ತಾಯಿ ಸರೋಜಮ್ಮನವರ ಮದುವೆಯ ಸೀರೆಯನ್ನು ಉಟ್ಟು, ಅವರದ್ದೇ ಸಾಂಪ್ರದಾಯಿಕ ಆಭರಣಗಳನ್ನು ತೊಟ್ಟು ಮಹಾಲಕ್ಷ್ಮಿಯಂತೆ ಕಂಗೊಳಿಸಿದ್ದರು.
ಅಮ್ಮ-ಅಪ್ಪನ ನೆನಪಿನ ವಿಶೇಷ ಬಳೆ
ತಮ್ಮ ಅತ್ತೆಯ ಸೀರೆ ಮಾತ್ರವಲ್ಲದೆ ಪ್ರಿಯಾ ಅವರು ತಮ್ಮ ಸ್ವಂತ ತಂದೆ-ತಾಯಿಯ ನೆನಪನ್ನೂ ಈ ಸಮಾರಂಭದಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾ ಅವರ ತಂದೆ ತಮ್ಮದೇ 25ನೇ ವರ್ಷದ ಮದುವೆ ವಾರ್ಷಿಕೋತ್ಸವದ ನೆನಪಿಗಾಗಿ ಪತ್ನಿಗೆ ಬಳೆಯೊಂದನ್ನು ಉಡುಗೊರೆಯಾಗಿ ನೀಡಿದ್ದರು. ಅದೇ ಬಳೆಯನ್ನು ಪ್ರಿಯಾ ಈಗ ತಮ್ಮ 25ನೇ ವರ್ಷದ ಸಂಭ್ರಮದಲ್ಲೂ ಧರಿಸಿ ಹಿರಿಯರ ಆಶೀರ್ವಾದ ಪಡೆದಿದ್ದಾರೆ.
“ಎಲ್ಲವೂ ನಿನ್ನಿಂದಲೇ ಸಾಧ್ಯ…” ಎಂದ ಕಿಚ್ಚ
ಈ ಸುಂದರ ಪಯಣದ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ಅವರು ತಮ್ಮ ಯಶಸ್ಸಿನ ಸಂಪೂರ್ಣ ಕ್ರೆಡಿಟ್ ಅನ್ನು ಪತ್ನಿ ಪ್ರಿಯಾಗೆ ನೀಡಿದ್ದಾರೆ. “ಈ 25 ವರ್ಷಗಳ ಚಂದದ ಜರ್ನಿ ನಿನ್ನಿಂದಲೇ ಸಾಧ್ಯವಾಗಿದೆ, ಇದರಲ್ಲಿ ನನ್ನ ಪಾಲು ಹೆಚ್ಚೇನೂ ಇಲ್ಲ. ಎಲ್ಲದಕ್ಕೂ ಧನ್ಯವಾದಗಳು ಪ್ರಿಯಾ” ಎಂದು ಹೇಳುವ ಮೂಲಕ ಸುದೀಪ್ ತಮ್ಮ ರಿಯಲ್ ಲೈಫ್ ಜಂಟಲ್ಮನ್ ಗುಣವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಇದನ್ನೂ ಓದಿ:
ಸ್ಯಾಂಡಲ್ವುಡ್ ತಾರೆಯರ ದಂಡು
ಕಿಚ್ಚನ ಈ ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಸಿನಿಮಾ ರಂಗದ ದಿಗ್ಗಜರು ಸಾಕ್ಷಿಯಾಗಿದ್ದರು. ಹಿರಿಯ ನಟಿ ಸುಮಲತಾ ಅಂಬರೀಶ್, ಖ್ಯಾತ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹಾಗೂ ಗಾಯಕ ವಿಜಯ ಪ್ರಕಾಶ್ ಸೇರಿದಂತೆ ಹಲವು ಆಪ್ತರು ಆಗಮಿಸಿ ದಂಪತಿಗೆ ಶುಭ ಹಾರೈಸಿದ್ದಾರೆ. ಗಾಯಕ ವಿಜಯ ಪ್ರಕಾಶ್ ಅವರು ವಿಶೇಷ ಹಾಡೊಂದನ್ನು ಹಾಡಿ ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿದ್ದರು. ಒಟ್ಟಿನಲ್ಲಿ ಇಡೀ ಕಾರ್ಯಕ್ರಮವು ಸುದೀಪ್-ಪ್ರಿಯಾ ಅವರ ಮದುವೆ ಮತ್ತೊಮ್ಮೆ ಮರುಕಳಿಸಿದಂತಹ ಅದ್ಭುತ ವಾತಾವರಣವನ್ನು ಸೃಷ್ಟಿಸಿತ್ತು.



