October 23, 2026
Friday, October 23, 2026
spot_img

‘ಜೈಲರ್ 2’ ಅಬ್ಬರಕ್ಕೆ ಐಕಾನ್ ಸ್ಟಾರ್ ಫಿದಾ: ಸೂಪರ್ ಸ್ಟಾರ್ ಚಾತುರ್ಯಕ್ಕೆ ಅಲ್ಲು ಅರ್ಜುನ್ ಜೈಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಈಗ ಎಲ್ಲೆಲ್ಲೂ ‘ಜೈಲರ್ 2’ ಸಿನಿಮಾದ್ದೇ ಸದ್ದು. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಈ ಬಹುನಿರೀಕ್ಷಿತ ಆಕ್ಷನ್ ಎಂಟರ್ಟೈನರ್ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಬರೆಯುತ್ತಿದೆ. ಈ ಅದ್ಭುತ ಯಶಸ್ಸನ್ನು ಟಾಲಿವುಡ್‌ನ ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ಮುಕ್ತಕಂಠದಿಂದ ಕೊಂಡಾಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಹಂಚಿಕೊಳ್ಳುವ ಮೂಲಕ ರಜಿನಿಕಾಂತ್ ಅವರ ಸ್ಟಾರ್‌ಡಮ್ ಹಾಗೂ ಚಿತ್ರತಂಡದ ಶ್ರಮವನ್ನು ಮನಸಾರೆ ಪ್ರಶಂಸಿಸಿದ್ದಾರೆ.

ಅಲ್ಲು ಅರ್ಜುನ್ ಅವರು ಬರೆದುಕೊಂಡಿರುವ ಸಾಲುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿವೆ. “ತಮ್ಮ ಶರ್ಟ್‌ನಲ್ಲಿ ಒಂದು ಸಣ್ಣ ಸುಕ್ಕು ಕೂಡ ಮೂಡದಂತೆ, ಕೇವಲ ತಮ್ಮ ವಿಶಿಷ್ಟ ಶೈಲಿಯಿಂದಲೇ 500 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆಯನ್ನು ತಂದುಕೊಡಲು ರಜನಿ ಗಾರು ಅವರಿಂದ ಮಾತ್ರ ಸಾಧ್ಯ” ಎಂದು ಅಲ್ಲು ಅರ್ಜುನ್ ಬಣ್ಣಿಸಿದ್ದಾರೆ. ರಜನಿಕಾಂತ್ ಅವರ ಸ್ಟಾರ್ ಪವರ್‌ಗೆ ಇಂತಹ ಬೃಹತ್ ಗೆಲುವುಗಳು ಸರ್ವೇ ಸಾಮಾನ್ಯ ಎಂದು ಅವರು ಹೇಳಿದ್ದಾರೆ.

ಈ ಚಿತ್ರವು ಆರಂಭದಿಂದ ಅಂತ್ಯದವರೆಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದಿರುವ ಅಲ್ಲು ಅರ್ಜುನ್, ಚಿತ್ರದ ಪ್ರತಿಯೊಂದು ವಿಭಾಗಕ್ಕೂ ಅಭಿನಂದನೆ ಸಲ್ಲಿಸಿದ್ದಾರೆ. ವಿಶೇಷವಾಗಿ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಹಿನ್ನೆಲೆ ಸಂಗೀತವೇ ಈ ಚಿತ್ರದ ನಿಜವಾದ ಪ್ರಾಣ ಎಂದು ಬಣ್ಣಿಸಿದ್ದಾರೆ. ಜೊತೆಗೆ, ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರ ಕಲ್ಪನೆ ಹಾಗೂ ಸನ್ ಪಿಕ್ಚರ್ಸ್ ಸಂಸ್ಥೆಯ ನಿರ್ಮಾಣ ವೈಖರಿಯನ್ನು ಶ್ಲಾಘಿಸಿದ್ದಾರೆ. ಒಬ್ಬ ಸ್ಟಾರ್ ನಟ, ಮತ್ತೊಬ್ಬ ದಿಗ್ಗಜ ನಟನ ಗೆಲುವನ್ನು ಮುಕ್ತವಾಗಿ ಆಚರಿಸುತ್ತಿರುವುದು ಅಭಿಮಾನಿಗಳಿಗೆ ತೀವ್ರ ಸಂತಸ ತಂದಿದೆ.

Must Read