ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಕಸ ವಿಲೇವಾರಿ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬೆಳಗ್ಗೆ ಕಸದ ಲಾರಿಗಳು ಮನೆ ಮುಂದೆ ಬಂದರೂ ಕಸ ಹಾಕೋದಕ್ಕೆ ಜನ ಇರೋದಿಲ್ಲ. ಬೆಳಗ್ಗೆ ಎಲ್ಲರೂ ಕೆಲಸ ಕಚೇರಿಗಳಿಗೆಂದು ಹೋದರೆ ಇನ್ನು ಬರುವುದು ಸಂಜೆಯಾಗುತ್ತದೆ. ಕಸದ ಗಾಡಿ ಬೆಳಗ್ಗೆ ಬದಲು ಸಂಜೆ ಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಜನ ಅಂದುಕೊಂಡಿದ್ದರು.
ಇದೀಗ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಇಂಥವರಿಗಾಗಿಯೇ ಕಸದ ಗಾಡಿಗಳನ್ನು ಸಂಜೆಯಿಂದ ಮಧ್ಯರಾತ್ರಿಯವರೆಗೂ ಕಳುಹಿಸಿಕೊಡುತ್ತಿದೆ. ಬೊಮ್ಮನಹಳ್ಳಿ ವ್ಯಾಪ್ತಿಯ ಐದು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಸಂಜೆ ವೇಳೆಯಲ್ಲೂ ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ವ್ಯವಸ್ಥೆ ಆರಂಭಿಸಲಾಗಿದೆ.
ಬೆಳಗ್ಗೆ ಆಗೋದೇ ಇಲ್ಲ
ಬೆಳಗ್ಗೆ ಮನೆಯಲ್ಲಿ ಯಾರೂ ಇರೋದಿಲ್ಲ. ಕೆಲವೊಮ್ಮೆ ಗಡಿಬಿಡಿಯಲ್ಲಿ ತಯಾರಾಗುವ ಸಮಯಕ್ಕೆ ಕಸದ ಗಾಡಿಯ ಸದ್ದು ಕೇಳುತ್ತದೆ. ಗ್ರೌಂಡ್ ಫ್ಲೋರ್‌ನಲ್ಲಿದ್ದರೆ ಐದು ನಿಮಿಷ ಎಂದು ಹೋಗಿ ಕಸ ಹಾಕಬಹುದು. ಬೇರೆ ಫ್ಲೋರ್‌ಗಳಲ್ಲಿ ಇರುವ ಜನ ಇದನ್ನು ಮಾಡುವುದಿಲ್ಲ. ಸಮಯ ಆಗುವುದಿಲ್ಲ. ಇದೇ ಕಾರಣಕ್ಕೆ ಮನೆಯಲ್ಲಿ ಕಸ ಜಮೆ ಆಗುತ್ತದೆ. ತದನಂತರ ರಸ್ತೆ ಬದಿಯೋ, ಖಾಲಿ ಸೈಟಿಗೋ ಬೀಳುತ್ತದೆ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.
ಸಂಜೆ 5ರಿಂದ ರಾತ್ರಿ 12ರವರೆಗೆ ಕಸ ಸಂಗ್ರಹ
ಈ ಸಮಸ್ಯೆ ಬಗೆಹರಿಸಲು ಸಂಜೆ ಕಸದ ಗಾಡಿಗಳು ಮನೆಯ ಮುಂದೆ ಬರಲಿವೆ. ಪ್ರತಿದಿನ ಸಂಜೆ 5 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ವಿಶೇಷ ಆಟೋಗಳು ಮತ್ತು ಸಿಬ್ಬಂದಿ ಮನೆಮನೆಗೆ ತೆರಳಿ ಕಸ ಸಂಗ್ರಹಿಸಲಿದ್ದಾರೆ. ಕಚೇರಿಯಿಂದ ಬಂದವರು, ಕಾಲೇಜುಗಳಿಂದ ಬಂದ ಮಕ್ಕಳೋ ಯಾರೋ ತಂದು ಕಸವನ್ನು ನೀಡುತ್ತಾರೆ. ಈ ಯೋಜನೆಗೆ ಜನರಿಗೆ ಮೆಚ್ಚಿಗೆ ವ್ಯಕ್ತವಾಗುವ ಸಾಧ್ಯತೆ ಹೆಚ್ಚಿದೆ. ಜನ ಆಗ ಕಸವನ್ನು ಖಾಲಿ ಸೈಟ್‌ಗಳ ಬಳಿ ಎಸೆಯೋದಿಲ್ಲ. ಬೊಮ್ಮನಹಳ್ಳಿ ವ್ಯಾಪ್ತಿಯ ಐದು ವಾರ್ಡ್‌ಗಳಲ್ಲಿ ಆರಂಭಿಸಿರುವ ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ, ಕಸ ವಿಲೇವಾರಿ ಸಮಸ್ಯೆ ಎದುರಿಸುತ್ತಿರುವ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.



