ಹೊಸದಿಗಂತ ವರದಿ ಬೆಳಗಾವಿ:
ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಇದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಎಂಇಎಸ್ ಮುಖಂಡ ಶುಭಂ ವಿಕ್ರಾಂತ ಶೆಳಕೆ ಸೇರಿದಂತೆ ಇಬ್ಬರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಅಟ್ರಾಸಿಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಇಬ್ಬರನ್ನೂ ನವೆಂಬರ್ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.
ಬಂಧಿತರನ್ನು ಬೆಳಗಾವಿಯ ತಾನಾಜಿ ಗಲ್ಲಿಯ ನಿವಾಸಿ ಶುಭಂ ವಿಕ್ರಾಂತ ಶೆಳಕೆ ಹಾಗೂ ಚೆಳುವನಟ್ಟಿಯ ನಿವಾಸಿ ಮನೋಹರ ಅಪ್ಪಾಜಿ ಹುಂದ್ರೆ ಎಂದು ಗುರುತಿಸಲಾಗಿದೆ.
ಬೆಳಗಾವಿಯ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 12/2025ಕ್ಕೆ ಸಂಬಂಧಿಸಿದಂತೆ, 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಎಸ್ಸಿ ನಂ. 285/2025ರ ಅಡಿಯಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ವಿಚಾರಣೆಗೆ ನಿಗದಿಪಡಿಸಿದ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ನ್ಯಾಯಾಲಯವು ಉದ್ಘೋಷಣೆ ಹೊರಡಿಸಿತ್ತು.
ನ್ಯಾಯಾಲಯದ ಆದೇಶದ ಮೇರೆಗೆ ಅಕ್ಟೋಬರ್ 22ರಂದು ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ವೈದ್ಯಕೀಯ ತಪಾಸಣೆ ಬಳಿಕ ಶುಭಂ ಶೆಳಕೆಯನ್ನು ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯೋತ್ಸವದ ಸಂದರ್ಭದಲ್ಲಿ ಕರಾಳ ದಿನಾಚರಣೆ ನಡೆಸುವ ವಿಚಾರವಾಗಿ ಬೆಳಗಾವಿ ಜಿಲ್ಲಾಡಳಿತದೊಂದಿಗೆ ವಾಗ್ವಾದಕ್ಕೆ ಇಳಿದಿದ್ದ ಶುಭಂ ಶೆಳಕೆ, ಗಡಿ ವಿವಾದದ ವಿಚಾರವಾಗಿ ಆಗಾಗ್ಗೆ ಸುದ್ದಿಯಲ್ಲಿದ್ದರು. ಇದೀಗ ಹಿಂದಿನ ಅಟ್ರಾಸಿಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದಾರೆ.



