ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೌತಿ ಬಂಡುಕೋರರ ದಾಳಿಯ ಪರಿಣಾಮ ಸೌದಿ ಅರೇಬಿಯಾದಲ್ಲಿನ ಪ್ರಮುಖ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಕರ್ನಾಟಕದಿಂದ ಮದೀನಾ, ಮೆಕ್ಕಾಕ್ಕೆ ತೆರಳಿದ್ದ 500ಕ್ಕೂ ಹೆಚ್ಚು ಉಮ್ರಾ ಯಾತ್ರಿಕರು ವಾಪಾಸ್ ಬರಲು ಆಗದೇ ಸಂಕಷ್ಟದಲ್ಲಿದ್ದಾರೆ.
ಕಳೆದ ಎರಡು ವಾರಗಳಿಂದಲೂ ವಿಮಾನ ನಿಲ್ದಾಣಗಳು ಬಂದ್ ಆಗಿವೆ. ಸೌದಿ ಅರೇಬಿಯಾಗೆ ಕರೆದುಕೊಂಡು ಹೋಗಿದ್ದ ಖಾಸಗಿ ಪ್ರವಾಸ ನಿರ್ವಾಹಕರು ಕೂಡ ವಾಪಾಸ್ ಕರ್ನಾಟಕಕ್ಕೆ ಕರೆದುಕೊಂಡು ಹೋಗುವ ಬಗ್ಗೆ ಸ್ಪಂದನೆ ನೀಡುತ್ತಿಲ್ಲ. ಹೀಗಾಗಿ ರಾಜ್ಯದ ಜನರ ಸ್ಥಿತಿ ಅತಂತ್ರವಾಗಿದೆ.
ತಮ್ಮ ಕುಟುಂಬದವರನ್ನು ಮೆಕ್ಕಾಕೆ ಕಳಿಸಿದ್ದ ಜನರು ಒತ್ತಡಕ್ಕೆ ಸಿಲುಕಿದ್ದಾರೆ. ನಮ್ಮ ಫ್ಯಾಮಿಲಿಯನ್ನು ವಾಪಾಸ್ ಕರೆದುಕೊಂಡು ಬನ್ನಿ ಎಂದು ಎಲ್ಲೆಡೆ ಮನವಿ ಮಾಡುತ್ತಿದ್ದಾರೆ. ಇಂಡಿಗೋ, ಆಕಾಸ ಏರ್ ಹಾಗೂ ಏರ್ ಇಂಡಿಯಾ ವಿಮಾನ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಅನುಮತಿ ನೀಡಬೇಕು. ವಿಮಾನದ ಮೂಲಕ ನಮ್ಮವರನ್ನು ಸುರಕ್ಷಿತವಾಗಿ ವಾಪಾಸ್ ಕರೆತರಬೇಕು ಎಂದು ಮನವಿ ಮಾಡಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಯಾತ್ರಿಕರನ್ನು ಸುರಕ್ಷಿತವಾಗಿ ಮತ್ತು ಆದಷ್ಟು ಬೇಗ ಕರ್ನಾಟಕಕ್ಕೆ ವಾಪಸ್ ಕರೆತರಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅಬ್ದುಲ್ ಅಜೀಂ ಹೇಳಿದ್ದಾರೆ. ಕಡಿಮೆ ವೆಚ್ಚದ ಪ್ಯಾಕೇಜ್ಗಳನ್ನು ಆಯ್ಕೆ ಮಾಡಿಕೊಂಡಿದ್ದ ಅನೇಕ ಯಾತ್ರಿಕರ ಟಿಕೆಟ್ಗಳು ಮರುಪಾವತಿಗೆ ಅರ್ಹವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಹೊಸ ಟಿಕೆಟ್ಗಳನ್ನು ಖರೀದಿಸಲು ಹಣದ ಕೊರತೆ ಎದುರಾಗಿರುವುದರಿಂದ ಅನೇಕ ಯಾತ್ರಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ವಾಪಸ್ ಬರಲು ಹೊಸ ಟಿಕೆಟ್ಗಳಿಗಾಗಿ ಹೆಚ್ಚುವರಿ ಹಣ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಸಚಿವ ಯು.ಟಿ. ಖಾದರ್ ಮಾತನಾಡಿದ್ದು, ಯಾತ್ರಕರ ಜೀವಕ್ಕೆ ಯಾವುದೇ ಹಾನಿಯಾಗಿಲ್ಲ. ನಮ್ಮ ಅಧಿಕಾರಿಗಳು ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಸೌದಿ ರಿಯಾಲ್ಗೆ ಭಾರತೀಯ ರೂಪಾಯಿಯ ವಿನಿಮಯ ಮೌಲ್ಯ ಸುಮಾರು 25 ರೂಪಾಯಿ ಇರುವುದರಿಂದ, ಒಬ್ಬರಿಗೆ ದಿನಕ್ಕೆ ಊಟಕ್ಕಾಗಿ ಸುಮಾರು 1,500 ರೂಪಾಯಿ ವೆಚ್ಚವಾಗುತ್ತಿದೆ. ಅಗತ್ಯವಿದ್ದರೆ ಯಾತ್ರಿಕರಿಗೆ ಆಹಾರದ ವ್ಯವಸ್ಥೆ ಮಾಡುತ್ತೇವೆ ಎಂದು ಖಾದರ್ ತಿಳಿಸಿದ್ದಾರೆ. ಅಕ್ಟೋಬರ್ 24 ಮತ್ತು 27ರಂದು ವಿಮಾನಗಳ ಮೂಲಕ ಯಾತ್ರಿಕರನ್ನು ವಾಪಸ್ ಕರೆತರಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.



